ಮಧು ವೈ. ಎನ್.

07 September 2026 · TechPost · ವಿಜಯ ಕರ್ನಾಟಕ

ಪ್ರಜ್ಞೆಯೇ ವಾಸ್ತವಕ್ಕೆ ಮೂಲವೇ?

ಪ್ರಜ್ಞೆಯೇ ವಾಸ್ತವಕ್ಕೆ ಮೂಲವೇ? — as printed in ವಿಜಯ ಕರ್ನಾಟಕ

ನಿಮಗೆಲ್ಲಾ ಉಪೇಂದ್ರ ಅವರ ಒಂದು ಜನಪ್ರಿಯ ಹಾಡು ನೆನಪಿರಬಹುದು. ಅದರಲ್ಲಿ ಅವರು ‘ನಾನು ಹುಟ್ಟಿದಾ ಮೇಲೇನೆ ಶತಕೋಟಿ ದೇವರು ಹುಟ್ಟಿದ್ದು’ ಅನ್ನುತ್ತಾರೆ. ಅಂದರೆ ಮನುಷ್ಯನಿಂದಲೇ ದೇವರು ಹುಟ್ಟಿದ್ದು ಅಂತ ಅರ್ಥ ಮಾಡಿಕೊಳ್ಳಬಹುದು. ಆದರೆ ಮುಂದಿನ ಸಾಲಿನಲ್ಲಿ ‘ನಾನು ಕಣ್ಬಿಟ್ಟ ಮೇಲೇನೇ ಆ ಸೂರ್ಯಚಂದ್ರರೂ ಹುಟ್ಟಿದ್ದು’ ಅಂದುಬಿಡುತ್ತಾರೆ. ಅರ್ಥಾತ್ ವೀಕ್ಷಿತನ ಮೇಲೆ ನೆಟ್ಟಿದ್ದ ಕೇಳುಗನ ಕ್ಯಾಮೆರಾ ಇದ್ದಕ್ಕಿದ್ದಂತೆ ವೀಕ್ಷಕನ ಮೇಲೆ ತಿರುಗಿಬಿಡುತ್ತದೆ! ಸೂರ್ಯಚಂದ್ರರು ಮೊದಲೇ ಇದ್ದರೂ ನನ್ನ ಪಾಲಿಗೆ ಹುಟ್ಟಿದ್ದು ನಾ ಕಣ್ಬಿಟ್ಟ ಮೇಲೆ ಅಂತ ಅರ್ಥಮಾಡಿಕೊಳ್ಳಬಹುದು.

ಹಾಡು ಇಲ್ಲಿಗೆ ನಿಂತಿದ್ದರೆ ಚೆನ್ನಾಗಿತ್ತು. ಮುಂದೆ ಹೋಗಿ- ‘ನಾನು ಇಲ್ಲದೇ ಏನಿಲ್ಲಾ, ನಾನಿದ್ರೆ ಎಲ್ಲಾ’ ಅಂದುಬಿಡುತ್ತಾರೆ. ಇದೀಗ ವೀಕ್ಷಕ ಮತ್ತು ವೀಕ್ಷಿತ ಇಬ್ಬರಿಂದಲೂ ದೂರ ಸರಿದ ಕ್ಯಾಮೆರಾ ಇವರನ್ನೇ ದಿಟ್ಟಿಸುತ್ತಾ ಹೌದಾ ಎಂದು ಕೇಳುತ್ತದೆ. ‘ನಾನು’ ಇಲ್ದೇ ಕ್ಯಾಮೆರಾ ಇಲ್ಲವೋ, ‘ಕ್ಯಾಮೆರಾ’ ಇಲ್ದೇ ‘ನಾನು’ ಇಲ್ಲವೋ?

ಅರರೆ ಇದೇನು ಉಪೇಂದ್ರ ವೇದಾದ್ವೈತಗಳನ್ನೋ ಅಥವಾ ಕ್ವಾಂಟಂ ಫಿಜಿಕ್ಸ್‌ ಅನ್ನೋ ಅರುಹುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಅವರ ಉದ್ದೇಶ ಏನಿತ್ತೋ, ಇರಲಿ-

ಹಿಂದಿನ ಲೇಖನದಲ್ಲಿ ಭೌತವಿಜ್ಞಾನ ಮತ್ತು ತತ್ವಜ್ಞಾನಗಳ ನಡುವಿನ ಸಮನ್ವಯ ಚರ್ಚಿಸುತ್ತಾ ‘ಪ್ರಜ್ಞೆಯೇ ವಾಸ್ತವದ ಮೂಲ’ ಎಂಬುದನ್ನು ನಾನು ಜನಪ್ರಿಯ ವಿಜ್ಞಾನ ಎಂದು ಕರೆದಿದ್ದೆ. ಕಾರಣ ಇದು ಈಗೀಗ ವಿಜ್ಞಾನಿ, ತತ್ವಜ್ಞಾನಿಗಳ ಹೊರತಾಗಿ ಜನಸಾಮಾನ್ಯರಲ್ಲೂ ಆಸಕ್ತಿ ಕೆರಳಿಸುವ ವಿಷಯವಾಗಿದೆ. ಎಲ್ಲೆಡೆ ಚರ್ಚೆಯಾಗುತ್ತಿದೆ. ಯಾವುದೇ ಪೂರ್ವಗ್ರಹಗಳನ್ನು ಇಟ್ಟುಕೊಳ್ಳದೇ ಈ ಲೇಖನದಲ್ಲಿ ಅದನ್ನು ಇನ್ನಷ್ಟು ವಿಸ್ತರಿಸೋಣ.

ಅನಾದಿಕಾಲದಿಂದಲೂ ಮನುಷ್ಯನಿಗೆ ದಿನನಿತ್ಯದ ಅನ್ನ, ನೆರಳು, ಬಟ್ಟೆಗಳಂತಹ ಮೂಲಭೂತ ಅಗತ್ಯಗಳು ತೀರುತ್ತಿದ್ದಂತೆಯೇ ಕಾಡುವ ಸಾಮಾನ್ಯ ಪ್ರಶ್ನೆಗಳು - ‘ನಾವು’ ನಿಜವೇ? ಈ ಜಗತ್ತು ‘ನಿಜವೇ’? ಇಲ್ಲಿನ ಆಗುಹೋಗುಗಳಿಗೆ ಅರ್ಥವಿದೆಯೇ? ಮತ್ತು ‘ನಮಗೆ’ ಎಂದೇನಾದರೂ ಉದ್ದೇಶಗಳಿವೆಯೇ? ಈ ಕುತೂಹಲವನ್ನು ಆತ ಆಧ್ಯಾತ್ಮ, ತತ್ವಶಾಸ್ತ್ರ, ಭೌತವಿಜ್ಞಾನ ಹೀಗೆ ಹಲವು ಶಾಖೆಗಳ ಮೂಲಕ ತಣಿಸಿಕೊಳ್ಳಲು ನಿರಂತರವಾಗಿ ಹವಣಿಸುತ್ತಿದ್ದಾನೆ. ಈ ಎಲ್ಲ ಶಾಖೆಗಳೂ ತ್ರಿವೇಣಿ ಸಂಗಮದಂತೆ ಒಟ್ಟಾಗಿ ಬಂದು ಸೇರುವುದು ಈ ಪ್ರಶ್ನೆಯೊಂದಿಗೆ: ‘ಪ್ರಜ್ಞೆಯಿಂದಲೇ ವಾಸ್ತವ, ಹೌದೇ?’

ಇದನ್ನು ಮೂರು ಪದರಗಳಿಂದ ಬಿಡಿಸಿ ನೋಡಿದರೆ ಮಾತ್ರ ನಮ್ಮ ದೃಷ್ಟಿ ಪೂರ್ತಿಯಾದೀತು. ಪೂರ್ವದ ಮೆಟಾಫಿಜಿಕ್ಸ್, ಪಶ್ಚಿಮದ ಆದರ್ಶವಾದ ಮತ್ತು ಆಧುನಿಕ ಕ್ವಾಂಟಂ ಮೆಕ್ಯಾನಿಕ್ಸ್.

ಅದ್ವೈತ ವೇದಾಂತ ಪರಂಪರೆಯಲ್ಲಿ ‘ದೃಗ್‌-ದೃಶ್ಯ-ವಿವೇಕ’ (ನೋಡುಗ ಮತ್ತು ನೋಡಲ್ಪಡುವ ವಸ್ತುವಿನ ನಡುವಿನ ವಿವೇಚನೆ) ಎಂಬ ಪರಿಕಲ್ಪನೆ ಇದೆ. ದೃಶ್ಯ ಎಂದರೆ ರೂಪ ಬಣ್ಣಗಳ ಈ ಜಗತ್ತು. ದೃಗ್ ಎಂದರೆ ನೋಡುಗ. ನಮ್ಮ ಕಣ್ಣುಗಳು ನೇರ ನೋಡುಗ; ಅವೂ ದಣಿಯಬಹುದಾದ್ದರಿಂದ ನಮ್ಮ ಮನಸು ಅವುಗಳ ಹಿಂದಿನ ನೋಡುಗ. ಚಿತ್ತವೂ ಸಹ ಚಂಚಲವಾದುದರಿಂದ, ಇವೆಲ್ಲದರ ಮೂಲದಲ್ಲಿರುವ ‘ಸಾಕ್ಷಿಪ್ರಜ್ಞೆ’ (Witness consciousness) ನಿಜವಾದ ವೀಕ್ಷಕ. ಈ ವೀಕ್ಷಕ ಮತ್ತು ವೀಕ್ಷಿತವನ್ನು ಬೇರ್ಪಡಿಸಿ ಅರಿಯುವ ಜ್ಞಾನವೇ ‘ವಿವೇಕ’. ಇಲ್ಲಿ ವೀಕ್ಷಕ (ಬ್ರಹ್ಮ/ಶುದ್ಧಪ್ರಜ್ಞೆ) ಮಾತ್ರವೇ ಸತ್ಯ, ವೀಕ್ಷಿತ ಜಗತ್ತು ಒಂದು ಮಾಯೆ ಅಥವಾ ಭ್ರಮೆ. ಉದಾಹರಣೆಗೆ: ಕತ್ತಲಲ್ಲಿ ಬಿದ್ದಿರುವ ಹಗ್ಗವನ್ನು ನೋಡಿ ‘ಹಾವು’ ಎಂದು ಭಯಪಡುವಂತೆ, ನಾವು ಈ ಜಗತ್ತನ್ನು ನಿಜವೆಂದು ಭ್ರಮಿಸುತ್ತಿದ್ದೇವೆ. ಬೆಳಕು ಬಂದಾಗ ಅಲ್ಲಿರುವುದು ಹಗ್ಗ ಮಾತ್ರ ಎಂದು ತಿಳಿಯುವಂತೆ, ಜ್ಞಾನ ಬಂದಾಗ ಕೇವಲ ‘ಬ್ರಹ್ಮ’ ಮಾತ್ರ ಸತ್ಯ ಎಂದು ಅರಿವಾಗುತ್ತದೆ.

ಬೌದ್ಧಧರ್ಮದ ಮಹಾಯಾನ ಪರಂಪರೆಯಲ್ಲಿ ಮುಖ್ಯವಾಗಿ ಎರಡು ಕವಲುಗಳಿವೆ. ನಾಗಾರ್ಜುನರು ಪ್ರತಿಪಾದಿಸಿದ ‘ಮಾಧ್ಯಮಕ’ ಪಂಥದ ಪ್ರಕಾರ, ಜಗತ್ತಿನಲ್ಲಿ ಯಾವುದಕ್ಕೂ ತನ್ನದೇ ಆದ ಸ್ವತಂತ್ರ ಅಥವಾ ಶಾಶ್ವತ ಅಸ್ತಿತ್ವವಿಲ್ಲ (ಶೂನ್ಯತಾ). ಇಲ್ಲಿನ ಪ್ರತಿಯೊಂದೂ ಮತ್ತೊಂದನ್ನು ಅವಲಂಬಿಸಿದೆ (ಪ್ರತೀತ್ಯಸಮುತ್ಪಾದ). ಅಂದರೆ ಜಗತ್ತು, ಪ್ರಜ್ಞೆ ಎರಡೂ ಸ್ವತಂತ್ರವಲ್ಲ. ಇನ್ನು ಅಸಂಗ ಮತ್ತು ವಸುಬಂಧು ಅವರು ಮುನ್ನಡೆಸಿದ ಇನ್ನೊಂದು ಪಂಥ ‘ಯೋಗಾಚಾರ’ (ವಿಜ್ಞಾನವಾದ): ಇದರ ಪ್ರಕಾರ, ನಮ್ಮ ಮನಸ್ಸಿನ ಹೊರಗೆ ಯಾವುದೇ ಬಾಹ್ಯ ಪ್ರಪಂಚ ಅಸ್ತಿತ್ವದಲ್ಲಿಲ್ಲ, ನಾವು ನೋಡುವ, ಕೇಳುವ ಜಗತ್ತು ಕೇವಲ ನಮ್ಮ ಪ್ರಜ್ಞೆಯ ಪ್ರೊಜೆಕ್ಷನ್ ಅಷ್ಟೇ. ಉದಾಹರಣೆಗೆ: ನಾವು ಕನಸು ಕಾಣುವಾಗ, ಆ ಕನಸಿನ ಪ್ರಪಂಚವು ನಮಗೆ ನಿಜವೆಂದೇ ಅನಿಸುತ್ತದೆ, ಆದರೆ ವಾಸ್ತವದಲ್ಲಿ ಅದು ಸಂಪೂರ್ಣವಾಗಿ ನಮ್ಮ ಮನಸ್ಸಿನ ಒಳಗಿನ ಸೃಷ್ಟಿಯಾಗಿರುತ್ತದೆ. ನಮ್ಮ ಎಚ್ಚರದ ಜಗತ್ತು ಕೂಡ ಇದೇ ರೀತಿ ಪ್ರಜ್ಞೆಯ ಆಟವಷ್ಟೇ.

ಆದರೆ, ಜೈಮಿನಿ ಮಹರ್ಷಿಗಳು ಹಾಗೂ ಕುಮಾರಿಲ ಭಟ್ಟರು ಪ್ರತಿಪಾದಿಸಿದ ‘ಮೀಮಾಂಸಾ’ ಪಂಥದ ಪ್ರಕಾರ ಭೌತಿಕ ಜಗತ್ತು ನೂರಕ್ಕೆ ನೂರು ಸಂಪೂರ್ಣ ವಾಸ್ತವ. ಅದು ನಮ್ಮ ಯಾವುದೇ ಪ್ರಜ್ಞೆಯಿಂದ ಸೃಷ್ಟಿಯಾದದ್ದಲ್ಲ. ಮನುಷ್ಯ ಜಗತ್ತನ್ನು ನೋಡುತ್ತಿದ್ದರೂ ಅಥವಾ ನೋಡದಿದ್ದರೂ, ಜಗತ್ತು ತನ್ನಷ್ಟಕ್ಕೆ ತಾನು ಅಸ್ತಿತ್ವದಲ್ಲಿರುತ್ತದೆ. ಮನಸ್ಸಿನ ಕೆಲಸ ಇರುವ ಜಗತ್ತನ್ನು “ಗ್ರಹಿಸುವುದು” ಮಾತ್ರವೇ ಹೊರತು, “ಸೃಷ್ಟಿಸುವುದು” ಅಲ್ಲ.

ಇನ್ನು ಪಶ್ಚಿಮಕ್ಕೆ ಹೊರಳೋಣ.

ಜಾರ್ಜ್ ಬರ್ಕ್ಲಿ ತಮ್ಮ ವ್ಯಕ್ತಿನಿಷ್ಠ ಆದರ್ಶವಾದದದಲ್ಲಿ ಹೀಗೆ ಹೇಳುತ್ತಾರೆ: ಯಾವುದೇ ಭೌತಿಕ ವಸ್ತು ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ. To be is to be perceived. ಅಂದರೆ, ಯಾರಾದರೂ ಒಂದು ವಸ್ತುವನ್ನು ಗ್ರಹಿಸಿದಾಗ ಮಾತ್ರ ಆ ವಸ್ತು ಅಸ್ತಿತ್ವದಲ್ಲಿರುತ್ತದೆ. ಕಾಡಿನಲ್ಲಿ ಒಂದು ಮರ ಉರುಳಿ ಬಿದ್ದಾಗ, ಅದನ್ನು ನೋಡಲು ಅಥವಾ ಆ ಶಬ್ದವನ್ನು ಕೇಳಲು ಅಲ್ಲಿ ಯಾರೂ ಇಲ್ಲದಿದ್ದರೆ, ಆ ಮರಕ್ಕೆ ಆ ಕ್ಷಣದಲ್ಲಿ ಅಸ್ತಿತ್ವ ಇರುವುದಿಲ್ಲ! (ಆದರೆ ಬರ್ಕ್ಲಿಯ ಪ್ರಕಾರ ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ).

ಇಮ್ಯಾನುಯೆಲ್ ಕಾಂಟ್ ತಮ್ಮ ಅತೀಂದ್ರಿಯ ಆದರ್ಶವಾದದ ಮೂಲಕ ಹೇಳುವುದು: ಜಗತ್ತು ತನ್ನ ಮೂಲ ಸ್ವರೂಪದಲ್ಲಿ ನಿಜವಾಗಿಯೂ ಹೇಗಿದೆ (Noumenon / Thing-in-itself) ಎಂಬುದನ್ನು ಮನುಷ್ಯರು ಎಂದಿಗೂ ತಿಳಿಯಲು ಸಾಧ್ಯವಿಲ್ಲ. ನಾವು ಅರಿಯುವುದು ಕೇವಲ ನಮ್ಮ ಮೆದುಳು ಮತ್ತು ಇಂದ್ರಿಯಗಳಿಗೆ ನಿಲುಕುವ ಜಗತ್ತನ್ನು (Phenomena) ಮಾತ್ರ. ಉದಾಹರಣೆಗೆ: ನೀವು ಸದಾ ಹಳದಿ ಬಣ್ಣದ ಕನ್ನಡಕವನ್ನು ಹಾಕಿಕೊಂಡಿದ್ದರೆ, ಜಗತ್ತು ನಿಮಗೆ ಹಳದಿಯಾಗಿಯೇ ಕಾಣುತ್ತದೆ. ನಿಜದಲ್ಲಿ ಅದು ಬೇರೇನೋ ಇದ್ದಿರಬಹುದು.

ಆರ್ಥರ್ ಶೋಪೆನ್‌ಹೌರ್ ಪ್ರಕಾರ, ನಾವು ನೋಡುವ ಈ ಜಗತ್ತು ಕೇವಲ ನಮ್ಮ ಮೆದುಳು ಕಟ್ಟಿಕೊಟ್ಟ ‘ಚಿತ್ರಣ’ (Representation) ಮಾತ್ರ. ಅಂದರೆ, ನೋಡುವ ಕಣ್ಣು ಮತ್ತು ಗ್ರಹಿಸುವ ಮೆದುಳು ಇರುವವರೆಗೆ ಮಾತ್ರ ಈ ಜಗತ್ತು ಹೀಗೆ ಕಾಣುತ್ತದೆ. ಆದರೆ ಈ ಕಣ್ಣಿಗೆ ಕಾಣುವ ಜಗತ್ತಿನ ಹಿಂದೆ, ಕಣ್ಣಿಗೆ ಕಾಣದ ಒಂದು ಕುರುಡು ‘ಮೂಲಶಕ್ತಿ’ (Will) ಇದೆ. ಈ ಶಕ್ತಿಯೇ ಗುರುತ್ವಾಕರ್ಷಣೆಯಾಗಿ, ಜೀವಜಾಲದ ಬದುಕುವ ಹಂಬಲವಾಗಿ ಇಡೀ ವಿಶ್ವವನ್ನು ನಡೆಸುತ್ತಿದೆ. ಈ ಜಗತ್ತನ್ನು ನೋಡುವವರು ಯಾರೂ ಇಲ್ಲದಿದ್ದರೂ (ವೀಕ್ಷಕನಿಲ್ಲದಿದ್ದರೂ), ಈ ಮೂಲಶಕ್ತಿ ಮಾತ್ರ ಸ್ವತಂತ್ರವಾಗಿ ತನ್ನಷ್ಟಕ್ಕೆ ತಾನು ಇದ್ದೇ ಇರುತ್ತದೆ.

ಮೇಲಿನ ಎಲ್ಲಾ ವಾದಗಳು ವ್ಯಕ್ತಿನಿಷ್ಠವಾದವು. ಜರ್ಮನ್ ತತ್ವಜ್ಞಾನಿಗಳಾದ ಷೆಲ್ಲಿಂಗ್ ಮತ್ತು ಹೆಗೆಲ್ ಮಾತ್ರ ವಸ್ತುನಿಷ್ಠ ಆದರ್ಶವಾದವನ್ನು ಎದುರಿಡುತ್ತಾರೆ. ಅವರ ಪ್ರಕಾರ, ಈ ವಿಶ್ವವೇ ಒಂದು ‘ಮಹಾಪ್ರಜ್ಞೆ’ (Universal Consciousness). ನಮ್ಮ ಸುತ್ತಲಿನ ನಿಸರ್ಗ, ಬೆಟ್ಟ-ಗುಡ್ಡ, ನಕ್ಷತ್ರಗಳು ನಿರ್ಜೀವ ‘ಜಡ’ ವಸ್ತುಗಳಲ್ಲ; ಬದಲಿಗೆ ಅವೆಲ್ಲವೂ ಈ ಮಹಾಪ್ರಜ್ಞೆಯ ಭೌತಿಕ ರೂಪಗಳು. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ: ಬಿಗ್ ಬ್ಯಾಂಗ್‌ನಿಂದ ಶುರುವಾಗಿ ಶತಕೋಟಿ ವರ್ಷಗಳ ಕಾಲ ಜಡವಾಗಿದ್ದ ಈ ವಿಶ್ವಕ್ಕೆ, ವಿಕಾಸದ ಹಾದಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವ ಹಾಗೂ ಅರ್ಥಮಾಡಿಕೊಳ್ಳುವ ತುಡಿತ ಉಂಟಾಯಿತು. ಆ ಕಾರಣಕ್ಕಾಗಿ ವಿಶ್ವ ಬೆಳೆಸಿಕೊಂಡ ‘ಕಣ್ಣುಗಳೇ’ ನಾವು, ಮನುಷ್ಯರು! ಅಂದರೆ, ನಾವೆಲ್ಲರೂ ಜಗತ್ತನ್ನು ನೋಡುತ್ತಿದ್ದೇವೆ ಎನ್ನುವುದಕ್ಕಿಂತ, ವಿಶ್ವ ನಮ್ಮ ಪ್ರಜ್ಞೆಯ ಮೂಲಕ ತನ್ನನ್ನು ತಾನು ನೋಡಿಕೊಳ್ಳುತ್ತಿದೆ. ಇಲ್ಲಿ ‘ನಿಸರ್ಗ’ ಮತ್ತು ‘ಪ್ರಜ್ಞೆ’ ಬೇರೆ ಬೇರೆಯಲ್ಲ, ಅವೆರಡೂ ವಿಶ್ವದ ವಿಕಾಸದ ಎರಡು ಮುಖಗಳಷ್ಟೇ.

ತತ್ವಜ್ಞಾನದ ಈ ಭಿನ್ನಾಭಿಪ್ರಾಯಗಳು, ವಿರೋಧಾಭಾಸಗಳು ಮತ್ತು ಬಿರುಕುಗಳೇ ಇಂದು ಕ್ವಾಂಟಂ ಮೆಕ್ಯಾನಿಕ್ಸ್‌ನಲ್ಲಿಯೂ ಪ್ರತಿಧ್ವನಿಸುತ್ತಿವೆ. ವಿಜ್ಞಾನಿಗಳ ನಡುವೆಯೂ ವೀಕ್ಷಕ (Observer) ಮತ್ತು ವಾಸ್ತವದ (Reality) ಬಗ್ಗೆ ಇದೇ ರೀತಿಯ ಗುಂಪುಗಾರಿಕೆಗಳಿವೆ. ಮುಂದಿನ ಸಂಚಿಕೆಯಲ್ಲಿ ಈ ವೈಜ್ಞಾನಿಕ ವಾದಗಳನ್ನು ನೋಡೋಣ.