ಮಧು ವೈ. ಎನ್.

25 August 2026 · TechPost · ವಿಜಯ ಕರ್ನಾಟಕ

ಯಾರ ಅಳತೆಗೂ ಸಿಗದ ಕ್ವಾಂಟಮ್ ವಿಜ್ಞಾನ

ಇತ್ತೀಚೆಗೆ ನಾನು ಸೈದ್ಧಾಂತಿಕ ಭೌತವಿಜ್ಞಾನಿ ಕಾರ್ಲೋ ರೊವೆಲ್ಲಿಯವರ ‘ಸೆವೆನ್ ಬ್ರೀಫ್ ಲೆಸನ್ಸ್ ಆನ್ ಫಿಸಿಕ್ಸ್’ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದೆ(ಇನ್ನೂ ಪ್ರಕಟಗೊಂಡಿಲ್ಲ). ಜಗತ್ತಿನ ಇರವಿನ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸುವ ಈ ಕೃತಿಯ ಬೆನ್ನಲ್ಲೇ, ರೊವೆಲ್ಲಿಯವರು ಭಾರತೀಯ ತತ್ವಜ್ಞಾನಿ ನಾಗಾರ್ಜುನರ ಬಗ್ಗೆಯೂ ಆಳವಾದ ಒಲವು ಹೊಂದಿದ್ದಾರೆಂಬ ವಿಚಾರ ನನ್ನ ಗಮನಕ್ಕೆ ಬಂತು. ಇದಕ್ಕೂ ಮುನ್ನ ಫ್ರಿಟ್ಜೋಫ್ ಕಾಪ್ರಾ ಅವರ ‘ದಿ ಟಾವೋ ಆಫ್ ಫಿಸಿಕ್ಸ್’ ಓದಿದ್ದಾಗ ಮೂಡಿದ್ದ ಕೆಲವು ಗೊಂದಲಗಳಿಗೆ ರೊವೆಲ್ಲಿಯವರ ಬರಹಗಳಲ್ಲಿ ನನಗೆ ಸ್ಪಷ್ಟ ಉತ್ತರಗಳು ಸಿಕ್ಕವು.

‘ಟಾವೋ ಆಫ್ ಫಿಸಿಕ್ಸ್’ ಸ್ಥೂಲವಾಗಿ ಕ್ವಾಂಟಮ್ ವಿಜ್ಞಾನವನ್ನು ಪೌರಸ್ತ್ಯ ತತ್ವಜ್ಞಾನದ ಪಕ್ಕದಲ್ಲಿಟ್ಟು ಮೇಲ್ನೋಟದ ಹೋಲಿಕೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ರೊವೆಲ್ಲಿ ಈ ಪ್ರಯತ್ನದ ಪ್ರಾಮಾಣಿಕತೆಯನ್ನು ಒಪ್ಪುತ್ತಲೇ, ಇವೆರಡರ ನಡುವಿನ ನಂಟು ಕೇವಲ ಮೇಲ್ಮೈ ಮಟ್ಟದ್ದೇ ಹೊರತು ಆಳವಾದದ್ದಲ್ಲ ಎನ್ನುತ್ತಾರೆ. ಭಿನ್ನವಾದ ಎರಡು ಶೋಧನೆಗಳು ಆಕಸ್ಮಿಕವಾಗಿ ಒಂದೇ ರೀತಿಯ ಪದಗಳನ್ನು ಬಳಸಿದಾಕ್ಷಣ, ಅವೆರಡೂ ಒಂದೇ ಸತ್ಯವನ್ನು ಹೇಳುತ್ತಿವೆ ಎಂದು ತೀರ್ಮಾನಿಸುವುದು ಬೌದ್ಧಿಕ ಶ್ರಮದಿಂದ ನುಣುಚಿಕೊಳ್ಳುವ ದಾರಿಯಾಗುತ್ತದೆ ಎಂಬುದು ಅವರ ಅಭಿಪ್ರಾಯ. ಇದು ನಾಗಾರ್ಜುನರ ವಿಚಾರಕ್ಕೂ ಅನ್ವಯಿಸುತ್ತದೆ.

ರೊವೆಲ್ಲಿ ವಿವರಿಸುವಂತೆ, ಕ್ವಾಂಟಮ್ ಭೌತವಿಜ್ಞಾನ ನಮಗೆ ಮೂರು ಪ್ರಮುಖ ಸಂಗತಿಗಳನ್ನು ತಿಳಿಸುತ್ತದೆ. ಇದರಲ್ಲಿ ಮೊದಲ ಎರಡನ್ನು ನಾವು ಸುಲಭವಾಗಿ ಗ್ರಹಿಸಬಹುದು, ಆದರೆ ಮೂರನೆಯದು ಕಳೆದ ನೂರು ವರ್ಷಗಳಿಂದಲೂ ನಿಗೂಢವಾಗಿಯೇ ಉಳಿದಿದೆ.

ಮೊದಲನೆಯದು, ಕಣಸ್ವರೂಪ (Granularity). ವಸ್ತುಗಳು ಪರಮಾಣುಗಳಿಂದ ಆಗಿರುವಂತೆ, ಬೆಳಕು ಫೋಟಾನ್‌ಗಳಿಂದಾಗಿದೆ. ರೊವೆಲ್ಲಿಯವರದೇ ಅಧ್ಯಯನ ಕ್ಷೇತ್ರವಾದ ‘ಲೂಪ್ ಕ್ವಾಂಟಮ್ ಗ್ರಾವಿಟಿ’ ಈ ಕಣಸ್ವರೂಪವನ್ನು ಬಾಹ್ಯಾಕಾಶ(Space) ವಿಸ್ತರಿಸುತ್ತದೆ. ನಾವು ಶಾಲೆಯಲ್ಲಿ ಓದಿದಂತೆ ಬಯಲು ಅಥವಾ ಬಾಹ್ಯಾಕಾಶವೆಂಬುದು ಒಂದು ನುಣುಪಾದ, ನಿರಂತರವಾಗಿ ಹರಿದಿರುವ ರಂಗಮಂಚವಲ್ಲ; ಅದೂ ಕೂಡ ಕಣಗಳಿಂದಲೇ ಆದದ್ದು. ಮತ್ತು ಆ ಕಣಗಳು ಬಾಹ್ಯಾಕಾಶದೊಳಗೆ ಕೂತಿರುವ ವಸ್ತುಗಳಲ್ಲ, ಬದಲಿಗೆ ಅವೇ ಬಾಹ್ಯಾಕಾಶ. ಹಾಗೆ ನೋಡಿದರೆ ನಾವು ಇದನ್ನು ಬಾಹ್ಯಾಕಾಶ ಅನ್ನುವುದು ತಪ್ಪು. ನಮ್ಮ ಖಾಲಿ ಬೊಗಸೆಯೊಳಗಿರುವುದೂ ಸಹ ಸ್ಪೇಸ್.

ಎರಡನೆಯದು, ಸಂಭವನೀಯತೆ (Probability). ಅತಿಸೂಕ್ಷ್ಮ ಮಟ್ಟದಲ್ಲಿ ಘಟನೆಗಳು ಬಹಳ ಯಾದೃಚ್ಛಿಕವಾಗಿ (random ಆಗಿ) ಜರುಗುತ್ತವೆ. ಈ ಸಿದ್ಧಾಂತ ನಮಗೆ ಒಂದು ಘಟನೆಯ ಕರಾರುವಾಕ್ ಫಲಿತಾಂಶವನ್ನು ನೀಡುವ ಬದಲು, ಅದು ಜರುಗುವ ಸಂಭವನೀಯತೆಯನ್ನಷ್ಟೇ ತಿಳಿಸುತ್ತದೆ.

ಮೂರನೆಯದ್ದೇ ಅತ್ಯಂತ ಜಟಿಲವಾದದ್ದು. ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕ್ವಾಂಟಮ್ ವಿಜ್ಞಾನ ನಮಗೆ ಹೇಳುವುದಿಲ್ಲ; ಬದಲಾಗಿ, ನಾವೇನಾದರೂ ಅಳತೆ ಮಾಡಲು ಹೋದರೆ, ನಮಗೆ ಏನು ‘ಕಾಣಿಸುತ್ತದೆ’ ಎಂಬುದನ್ನಷ್ಟೇ ಹೇಳುತ್ತದೆ. ನಮ್ಮ ಅಳತೆಗೆ ಮುನ್ನ ಅಲ್ಲಿ ಏನಾಗುತ್ತಿತ್ತು ಎಂಬ ಪ್ರಶ್ನೆಗೆ ಸಿದ್ಧಾಂತದ ಬಳಿ ಉತ್ತರವಿಲ್ಲ. ಆ ಬಿಟ್ಟ ಸ್ಥಳದಲ್ಲಿ ಯಾವುದಾದರೂ ಕಥೆ ಕಟ್ಟಲು ಹೋದರೆ, ಅದು ವಿರೋಧಾಭಾಸಗಳಲ್ಲೇ ಅಂತ್ಯವಾಗುತ್ತದೆ.

ಇದರ ಪರಿಣಾಮವಾಗಿ, ಗಣಿತದ ಸಮೀಕರಣಗಳೊಳಗೆ ಒಬ್ಬ ‘ವೀಕ್ಷಕ’ ಬಂದು ಕೂರುವಂತಾಗಿದೆ. ಕ್ಲಾಸಿಕಲ್ ವಿಜ್ಞಾನದಲ್ಲಿ ಈ ವೀಕ್ಷಕ ವ್ಯವಸ್ಥೆಯಿಂದ ಹೊರಗೆ, ಉಪಕರಣವೊಂದನ್ನು ಹಿಡಿದು ಸ್ವತಂತ್ರವಾಗಿ ನಿಂತಿರುತ್ತಾನೆ; ಕ್ವಾಂಟಮ್ ವಿಜ್ಞಾನದಲ್ಲಿ ಆ ಗೋಡೆ ಕುಸಿದುಬೀಳುತ್ತದೆ. ಇದೊಂದು ವಿಚಿತ್ರವಾದ ಪರಿಸ್ಥಿತಿ. ಆಂಡ್ರೊಮಿಡಾ ಗ್ಯಾಲಕ್ಸಿಯಲ್ಲಿ ನಡೆಯುವ ಘಟನೆಗಳು ನಮಗಾಗಿ ಕಾಯುವುದಿಲ್ಲವಲ್ಲ? ಯಾರಾದರೂ ನನ್ನನ್ನು ನೋಡುತ್ತಿದ್ದಾರೋ ಎಂಬುದು ಪ್ರಕೃತಿಗೆ ಹೇಗೆ ತಿಳಿಯುತ್ತದೆ?

೧೯೯೦ರ ದಶಕದಿಂದಲೂ ರೊವೆಲ್ಲಿ ಈ ಸಮಸ್ಯೆಗೆ ಒಂದು ಪರಿಹಾರವನ್ನು ಮಂಡಿಸುತ್ತಾ ಬಂದಿದ್ದಾರೆ. ಅವರ ಪ್ರಕಾರ, ಕ್ವಾಂಟಮ್ ವಿಜ್ಞಾನದ ತಿರುಳು ಇರುವುದು ವೀಕ್ಷಕನಲ್ಲಿ ಅಲ್ಲ, ಬದಲಿಗೆ ‘ಒಡನಾಟ’ದಲ್ಲಿ (Relation).

ಉದಾಹರಣೆಗೆ, ಒಂದು ಎಲೆಕ್ಟ್ರಾನ್‌ಗೆ ಒಂಟಿಯಾದ, ಸ್ವತಂತ್ರವಾದ ಗುಣಗಳೇ ಇಲ್ಲ. ಇನ್ಯಾವುದರೊಂದಿಗೋ ಒಡನಾಟಕ್ಕೆ ಬಂದಾಗ ಮಾತ್ರವೇ ಅದು ನಿರ್ದಿಷ್ಟ ಗುಣಗಳೊಂದಿಗೆ ಮೈದಾಳುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ, ಒಂದು ಕಲ್ಲು ಎಂದರೆ ಅದರ ಸುತ್ತಲಿನ ವಸ್ತುಗಳೊಂದಿಗಿನ ನಿರಂತರ ಒಡನಾಟವಷ್ಟೇ. ಆ ಕ್ರಿಯೆಗಳೇ ಆ ಕಲ್ಲಿಗೆ ‘ಇರವನ್ನು’ ಒದಗಿಸಿಕೊಡುತ್ತವೆ.

ಇಲ್ಲಿ ಜನಪ್ರಿಯ ವಿಜ್ಞಾನ ತಪ್ಪಾಗಿ ಪ್ರಜ್ಞೆಯನ್ನು ಎಳೆದುತಂದು, ‘ನಮ್ಮ ಪ್ರಜ್ಞೆಯೇ ವಾಸ್ತವವನ್ನು ಸೃಷ್ಟಿಸುತ್ತದೆ’ ಎಂದು ಸಾರುತ್ತದೆ. ಆದರೆ ರೊವೆಲ್ಲಿಯವರ ಪ್ರಕಾರ, ಈ ಒಡನಾಟದ ಇನ್ನೊಂದು ತುದಿಯಲ್ಲಿ ಮನುಷ್ಯನ ಮನಸ್ಸೇ ಇರಬೇಕೆಂದಿಲ್ಲ. ಅಲ್ಲಿ ಇನ್ನೊಂದು ಪರಮಾಣು ಇದ್ದರೂ ಸಾಕು, ಇನ್ನೊಂದು ಕಲ್ಲಿದ್ದರೂ ಸಾಕು.

ರೊವೆಲ್ಲಿಯವರ ಈ ವಾದವನ್ನು ಕೇಳಿದ ಹಲವರು, “ನೀವು ನಾಗಾರ್ಜುನನನ್ನು ಓದಿದ್ದೀರಾ?” ಎಂದು ಅವರನ್ನು ಕೇಳಿದರಂತೆ. ಕೊನೆಗೂ ರೊವೆಲ್ಲಿ, ಅಮೆರಿಕದ ವಿಶ್ಲೇಷಣಾತ್ಮಕ ತತ್ವಜ್ಞಾನಿ ಜೇ ಗಾರ್ಫೀಲ್ಡ್ ಇಂಗ್ಲಿಷ್‌ಗೆ ಅನುವಾದಿಸಿರುವ ನಾಗಾರ್ಜುನನ ಕೃತಿಯನ್ನು ಓದಿದರಂತೆ. ಈ ಅನುವಾದ ವಸ್ತುನಿಷ್ಠವಾಗಿದೆ ಎಂದು ಹೆಸರುವಾಸಿ.

ಕ್ರಿಸ್ತಶಕ ಎರಡನೇ ಶತಮಾನದ ಆಸುಪಾಸಿನಲ್ಲಿದ್ದ ನಾಗಾರ್ಜುನ ‘ಮಾಧ್ಯಮಕ’ ಪಂಥವನ್ನು ಹುಟ್ಟುಹಾಕಿದವರು. ಅವರ ‘ಮೂಲಮಾಧ್ಯಮಕಕಾರಿಕಾ’ದ ಕೇಂದ್ರ ಪದವೇ ‘ಸ್ವಭಾವ’. ಇಲ್ಲಿ ಸ್ವಭಾವ ಎಂದರೆ ದಿನನಿತ್ಯದ ನಡವಳಿಕೆ ಎಂದಲ್ಲ; ಬದಲಾಗಿ ಒಂದು ವಸ್ತು ತನ್ನ ಸುತ್ತಲಿನ ಎಲ್ಲದರಿಂದಲೂ ಬಿಡುಗಡೆಗೊಂಡು, ತನ್ನಷ್ಟಕ್ಕೆ ತಾನೇ ಹೊಂದಿರುವ ಆಂತರಿಕ ಅಸ್ತಿತ್ವ ಅಥವಾ ಸ್ವತಂತ್ರವಾದ ಇರವು.

ನಾಗಾರ್ಜುನರ ವಾದವೆಂದರೆ, ಜಗತ್ತಿನಲ್ಲಿ ಯಾವ ವಸ್ತುವಿಗೂ ಅಂಥ ‘ಸ್ವಭಾವ’ವಿಲ್ಲ. ಪ್ರತಿಯೊಂದೂ ತಾನು ಏನಾಗಿದೆಯೋ, ಅದು ಇತರ ವಸ್ತುಗಳ ಮೇಲಿನ ಅವಲಂಬನೆಯಿಂದ ಹಾಗೂ ನಿರಂತರ ಒಡನಾಟದಿಂದ ಮಾತ್ರ. ಬೌದ್ಧಧರ್ಮದ ಹಳೆಯ ‘ಪ್ರತೀತ್ಯಸಮುತ್ಪಾದ’ (ಒಂದನ್ನೊಂದು ನೆಚ್ಚಿದ ಹುಟ್ಟು) ಪರಿಕಲ್ಪನೆಯನ್ನು ಅದರ ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯುವ ಅವರು, ಈ ಸ್ವತಂತ್ರ ಇರವಿನ ಇಲ್ಲದಿರುವಿಕೆಯನ್ನೇ ‘ಶೂನ್ಯತೆ’ ಎಂದು ಕರೆಯುತ್ತಾರೆ.

ಆದರೆ, ಶೂನ್ಯತೆ ಎಂದರೆ ಜಗತ್ತಿನಲ್ಲಿ ಯಾವುದೂ ಅಸ್ತಿತ್ವದಲ್ಲಿಲ್ಲ ಎಂದಲ್ಲ; ಜಗತ್ತೆಂಬುದು ಕೇವಲ ಮಾಯೆ, ಅದನ್ನು ತಳ್ಳಿಹಾಕಬೇಕು ಎಂಬುದೂ ಅವರ ವಾದವಲ್ಲ. ಅಲ್ಲೊಂದು ಕುರ್ಚಿ ಇದೆ. ಆದರೆ, ಆ ಕುರ್ಚಿ ಎಲ್ಲದರಿಂದ ಸ್ವತಂತ್ರವಾಗಿ ಅಸ್ತಿತ್ವದಲ್ಲಿದೆ ಎಂಬುದನ್ನಷ್ಟೇ ನಾಗಾರ್ಜುನ ನಿರಾಕರಿಸುತ್ತಾರೆ. ಭೌತವಿಜ್ಞಾನವೂ ಇದನ್ನು ಒಪ್ಪುತ್ತಲೇ, ಆ ಕುರ್ಚಿಯನ್ನು ಅಧ್ಯಯನದ ಮೂಲಕ ಅರ್ಥಮಾಡಿಕೊಳ್ಳಲು ಸಾಧ್ಯವಿದೆ ಎನ್ನುತ್ತದೆ. ತಾವು ಹೇಳಲು ಹೆಣಗಾಡುತ್ತಿದ್ದ ವಿಚಾರವೊಂದಕ್ಕೆ ಹದಿನೆಂಟು ಶತಮಾನಗಳ ಹಿಂದೆಯೇ ತತ್ವಜ್ಞಾನಿಯೊಬ್ಬರು ಶಬ್ದಕೋಶ ಒದಗಿಸಿದ್ದರು ಎಂಬುದು ರೊವೆಲ್ಲಿ ನಾಗಾರ್ಜುನರಲ್ಲಿಟ್ಟಿರುವ ಕೃತಜ್ಞತೆ.

ರೊವೆಲ್ಲಿಯವರ ಇನ್ನೊಂದು ಮಾತು ಇಲ್ಲಿ ಉಲ್ಲೇಖಾರ್ಹ. ವಿಜ್ಞಾನವೆಂಬುದು ಎಂದಿಗೂ ಒಬ್ಬ ಮೇಧಾವಿಯ ಸೃಷ್ಟಿಯಲ್ಲ. ಶ್ರೋಡಿಂಗರ್ ವೇದಾಂತವನ್ನು ಓದಿದ್ದ; ಭಾರತದ ಚಿಂತಕರು ಮೆಡಿಟರೇನಿಯನ್ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ವಿಚಾರಗಳು ಸದಾ ಗಡಿಗಳನ್ನು ದಾಟುತ್ತಲೇ ಇರುತ್ತವೆ. ಹಾಗೆ ಗಡಿದಾಟಿದ್ದರಿಂದಲೇ ಅವು ಬೆಳೆದಿವೆ ಮತ್ತು ವಿಸ್ತಾರಗೊಂಡಿವೆ. ಜ್ಞಾನದ ಪರಂಪರೆಯೊಂದನ್ನು ‘ಇದು ನಮ್ಮದು’ ಎಂದು ಬೀಗ ಜಡಿದಿಟ್ಟ ಕೂಡಲೇ, ನಾವು ಅದನ್ನು ಬಳಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತೇವೆ.