ಕಡೆಗೂ ಮಿದುಳೆಂಬ ಕೋಟೆಯ ಬಾಗಿಲು ತೆರೆಯಿತು…
ಮನುಷ್ಯ ಈ ತನಕ ಹೃದಯವನ್ನು ಬಗೆದು ಪುನಃ ಹೊಲಿಯಬಲ್ಲವನಾಗಿದ್ದ. ಕಿಡ್ನಿ, ಕಣ್ಣಿನ ಪೊರೆ ಬದಲಾಯಿಸುತ್ತಿದ್ದ. ಆದರೆ ಮೆದುಳಿನ ವಿಷಯದಲ್ಲಿ ಮಾತ್ರ ಕೇವಲ ಅದನ್ನು ‘ಓದುವ’ ಶಕ್ತಿ ಗಳಿಸಿದ್ದ. ಉದಾಹರಣೆಗೆ, ನಾವು ಹೆದರಿದಾಗ ಮೆದುಳಿನ ಯಾವ ಭಾಗ ಚುರುಕಾಗುತ್ತದೆ ಎಂಬುದನ್ನು ಸ್ಕ್ಯಾನರ್ ಮತ್ತು ಎಲೆಕ್ಟ್ರೋಡ್ಗಳ ಮೂಲಕ ಕಂಡುಹಿಡಿಯಬಲ್ಲವನಾಗಿದ್ದ.
ಇತ್ತೀಚೆಗಿನ ಎರಡು ಬೆಳವಣಿಗೆಗಳು ಇನ್ನು ಮುಂದೆ ನಾವು ಮೆದುಳಿನಲ್ಲಿ ‘ಬರೆಯಬಲ್ಲೆವು’ ಎಂಬುದನ್ನು ಸೂಚಿಸಿವೆ. ಈ ಬಾರಿಯ ವೈದ್ಯಕೀಯ ನೊಬೆಲ್ ಆಪ್ಟೋಜೆನೆಟಿಕ್ಸ್ ಕ್ಷೇತ್ರಕ್ಕೆ ಲಭಿಸಿದೆ. ಇನ್ನೊಂದು ಕಡೆ, ಮಸ್ಕ್ನ ನ್ಯೂರೋಲಿಂಕ್ ಸಂಸ್ಥೆ ಕುರುಡರಿಗೆ ದೃಷ್ಟಿ ತಂದುಕೊಡುವ ಉದ್ದೇಶದಿಂದ ಮೆದುಳಿನ ದೃಷ್ಟಿಕೇಂದ್ರಕ್ಕೆ ‘ಬ್ಲೈಂಡ್ಸೈಟ್’ ಎಂಬ ಚಿಪ್ ಅಳವಡಿಸಲು ಸಿದ್ಧತೆ ನಡೆಸುತ್ತಿದೆ. ಒಂದು ವಿಜ್ಞಾನ, ಇನ್ನೊಂದು ತಂತ್ರಜ್ಞಾನ.
ವಿಜ್ಞಾನಿಗಳಾದ ಹೆಗಮನ್ ಮತ್ತು ನೆಗೆಲ್ ‘ಕ್ಲಾಮಿಡೋಮೊನಾಸ್’ ಅನ್ನುವ ಏಕಕೋಶೀಯ ಹಸಿರು ಪಾಚಿಯ ಬಗ್ಗೆ ಅಧ್ಯಯನ ನಡೆಸುತ್ತಿದ್ದರು. ಈ ಪಾಚಿಗೆ ಬೆಳಕಿನತ್ತ ಈಜುವ ಗುಣವಿತ್ತು. ಕಣ್ಣುಗಳೇ ಇಲ್ಲದ ಒಂದು ಜೀವಕೋಶಕ್ಕೆ ಬೆಳಕು ಎಲ್ಲಿದೆ ಅಂತ ಹೇಗೆ ಗೊತ್ತಾಯ್ತು? ಇದು ಅವರ ಮುಂದಿದ್ದ ಸವಾಲು. ೨೦೦೨-೦೩ರ ಹೊತ್ತಿಗೆ ಇದಕ್ಕೆ ಉತ್ತರ ಸಿಕ್ಕಿತು: ಆ ಕೋಶದ ಪೊರೆಯಲ್ಲಿ ‘ಚಾನೆಲ್ರೋಡಾಪ್ಸಿನ್’ ಎಂಬ ಒಂದು ಪ್ರೋಟೀನ್ ಇರುತ್ತದೆ. ಅದು ನೀಲಿ ಬೆಳಕು ಬಿದ್ದ ತಕ್ಷಣ ಒಂದು ಸಣ್ಣ ರಂಧ್ರವನ್ನು ತೆರೆಯುತ್ತದೆ. ಅಯಾನುಗಳು ಒಳಗೆ ಹರಿಯುತ್ತವೆ, ಜೀವಕೋಶ ಅದಕ್ಕೆ ಪ್ರತಿಕ್ರಿಯಿಸುತ್ತದೆ. ಅಂದರೆ ಇದೊಂದು ಬೆಳಕಿನ ಕಣದಿಂದ (ಫೋಟಾನ್) ಆನ್ ಆಗುವ ಜೈವಿಕ ಸ್ವಿಚ್.
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಮನೋವೈದ್ಯ ಡೈಸರೋತ್ ಎಂಬುವವರು ಈ ಸ್ವಿಚ್ಚನ್ನು ಬೇರೆಲ್ಲಿ ಬಳಸಬಹುದು ಅಂತ ಯೋಚಿಸಿದರು. ಒಂದು ವೇಳೆ ಚಾನೆಲ್ರೋಡಾಪ್ಸಿನ್ ಪ್ರೋಟೀನನ್ನು ನಮ್ಮ ನರಕೋಶದೊಳಗೆ ಸೇರಿಸಲು ಸಾಧ್ಯವಾದರೆ ಬೆಳಕಿನ ಮೂಲಕ ನಮ್ಮ ನರಕೋಶವನ್ನು ಪ್ರಚೋದಿಸಬಹುದಲ್ಲವೇ? ೨೦೦೫ರಷ್ಟತ್ತಿಗೆ ಅವರು ಇದನ್ನು ಇಲಿಗಳ ಜೀವಕೋಶಗಳಲ್ಲಿ ಸಾಧಿಸಿಯೇಬಿಟ್ಟರು. ಮೊದಲು ಇಲಿಯ ಮೆದುಳಿನ ಒಂದು ನಿರ್ದಿಷ್ಟ ಬಗೆಯ ನರಕೋಶಕ್ಕೆ ಚಾನೆಲ್ರೋಡಾಪ್ಸಿನ್ ಜೀನನ್ನು ಸೇರಿಸಿದರು. ನಂತರ ಮೆದುಳಿನ ಮೋಟಾರ್ ಕಾರ್ಟೆಕ್ಸ್ನಲ್ಲಿರುವ ಕೋಶಗಳಿಗೆ ಒಂದು ತೆಳುವಾದ ಆಪ್ಟಿಕಲ್ ಫೈಬರ್ ಎಳೆದರು. ನೀಲಿ ಬೆಳಕನ್ನು ಹರಿಸಿದರು. ಈ ಮೂಲಕ ಇಲಿಯ ಮೀಸೆಯ ಚಲನೆಯನ್ನು ನಿಯಂತ್ರಿಸಿದರು. ನಮಗೆ ಬೇಕಂದಾಗ ಮೀಸೆ ಆಡಿಸಬಹುದು, ನಿಲ್ಲಿಸಬಹುದು!
ಇದೇ ಆಪ್ಟೋಜೆನೆಟಿಕ್ಸ್. ಈ ಸಾಧನದಿಂದ ವಿಜ್ಞಾನಿಗಳು ಇಲಿಯೊಂದು ಬೇಟೆಯಾಡುವಂತೆ ಅಥವಾ ಬೇಟೆ ನಿಲ್ಲಿಸುವಂತೆ ಮಾಡಿದ್ದಾರೆ. ಈಗ ನಮ್ಮಲ್ಲಿ ಸಹಜವಾಗಿ ಮೂಡುವ ಪ್ರಶ್ನೆ: ಇದನ್ನೆಲ್ಲಾ ಮನುಷ್ಯರಲ್ಲೂ ಮಾಡಬಹುದೇ? ಇದಕ್ಕೆ ಪ್ರಾಮಾಣಿಕ ಉತ್ತರ: ಕೊಂಚ ಕಷ್ಟ, ಆದರೆ ಹೌದು. ಮೊದಲಿಗೆ ವ್ಯಕ್ತಿಯೊಬ್ಬನ ಮೆದುಳಿನ ಕೋಶಗಳಿಗೆ ಹೊರಗಿನಿಂದ ಒಂದು ಜೀನನ್ನು ಸೇರಿಸಬೇಕು, ಮತ್ತು ಆ ಕೋಶಗಳತ್ತ ಬೆಳಕು ತಲುಪುವಂತೆ ಮಾಡಬೇಕು. ನಮ್ಮ ತಲೆಬುರುಡೆಯೊಳಗೆ ಇಷ್ಟೆಲ್ಲ ಆಟ ಆಡುವುದು ಅಷ್ಟು ಸುಲಭವಲ್ಲ.
ಆದರೆ ಕಣ್ಣಿನಲ್ಲಿ ಇದು ಸಾಧ್ಯ! ಯಾಕೆಂದರೆ ಕಣ್ಣಿನ ರಚನೆಯೇ ಹಾಗಿದೆ- ಅದು ಬೆಳಕನ್ನು ತಾನಾಗೇ ಒಳಗೆ ಬಿಟ್ಟುಕೊಳ್ಳುತ್ತದೆ. ೨೦೨೧ರಲ್ಲಿ ಪ್ಯಾರಿಸ್ನ ಜೋಸ್-ಅಲೈನ್ ಸಾಹೆಲ್ ನೇತೃತ್ವದ ತಂಡ, ‘ರೆಟಿನೈಟಿಸ್ ಪಿಗ್ಮೆಂಟೋಸಾ’ ಎಂಬ ಕಾಯಿಲೆಯಿಂದ ಅಂಧನಾದ ವ್ಯಕ್ತಿಯೊಬ್ಬನ ಕಣ್ಣಿನ ರೆಟಿನಾ ಕೋಶಗಳಿಗೆ ಬೆಳಕಿಗೆ ಸ್ಪಂದಿಸುವ ಪ್ರೋಟೀನ್ನ ಜೀನನ್ನು ಚುಚ್ಚಿತು. ಬೆಳಕನ್ನು ಸರಿಯಾದ ತರಂಗಾಂತರಕ್ಕೆ ಹಿಗ್ಗಿಸುವ ವಿಶೇಷ ಕನ್ನಡಕವನ್ನು ಧರಿಸಿ ಆ ವ್ಯಕ್ತಿ ವರ್ಷಗಳ ನಂತರ ಮೊದಲ ಬಾರಿಗೆ ಟೇಬಲ್ ಮೇಲಿದ್ದ ನೋಟ್ಬುಕ್ ಅನ್ನು ಪತ್ತೆಹಚ್ಚಿದ ಮತ್ತು ಕಪ್ಗಳನ್ನು ಎಣಿಸಿದ. ಆ ದೃಷ್ಟಿ ಸ್ವಲ್ಪ ಮಸುಕಾಗಿತ್ತು, ಅದಕ್ಕೆ ಬಣ್ಣ ಗುರುತಿಸುವ ಶಕ್ತಿ ಇರಲಿಲ್ಲ. ಆದರೂ, ಆಪ್ಟೋಜೆನೆಟಿಕ್ಸ್ ತಂತ್ರಜ್ಞಾನ ಮನುಷ್ಯನ ಕಳೆದುಹೋದ ಇಂದ್ರಿಯವೊಂದನ್ನು ಮರಳಿ ತಂದುಕೊಟ್ಟ ಮೊದಲ ಘಟನೆ ಅದಾಗಿತ್ತು.
ನ್ಯೂರೋಲಿಂಕ್ನ ‘ಬ್ಲೈಂಡ್ಸೈಟ್’ ಇದೇ ಗುರಿಯತ್ತ ಸಾಗುವ ಇನ್ನೊಂದು ಭಿನ್ನ ಹಾದಿ. ಇಲ್ಲಿ ಸಾವಿರಾರು ಅತಿ ತೆಳುವಾದ, ಶಾವಿಗೆಯಂತಹ ಮೈಕ್ರೋ ಎಲೆಕ್ಟ್ರೋಡುಗಳನ್ನು ಮೆದುಳಿನ ಹಿಂಭಾಗದಲ್ಲಿರುವ ದೃಷ್ಟಿಕೇಂದ್ರಕ್ಕೆ ಅಳವಡಿಸಲಾಗುತ್ತದೆ. ಒಂದು ಕ್ಯಾಮೆರಾ ಎದುರಿನ ದೃಶ್ಯವನ್ನು ಸೆರೆಹಿಡಿಯುತ್ತದೆ; ಚಿಪ್ ಆ ಚಿತ್ರವನ್ನು ವಿದ್ಯುತ್ ಕಂಪನಗಳನ್ನಾಗಿ ಪರಿವರ್ತಿಸುತ್ತದೆ; ಆ ಕಂಪನಗಳು ಮೆದುಳಲ್ಲಿನ ದೃಷ್ಟಿಕೇಂದ್ರವನ್ನು ಪ್ರಚೋದಿಸುತ್ತವೆ. ಆಗ ದೃಷ್ಟಿಕೇಂದ್ರದಲ್ಲಿ ಆ ಚಿತ್ರ ಮೂಡುತ್ತದೆ. ಇಲ್ಲಿ ಕಣ್ಣು ಮತ್ತು ದೃಷ್ಟಿಯ ನರವನ್ನು ಸಂಪೂರ್ಣವಾಗಿ ಬೈಪಾಸ್ ಮಾಡಲಾಗುತ್ತದೆ. ಮೆದುಳಿನ ದೃಷ್ಟಿಕೇಂದ್ರ ಸುಸ್ಥಿತಿಯಲ್ಲಿದ್ದರೆ ಸಾಕು, ಹುಟ್ಟುಕುರುಡರಿಗೂ ಈ ತಂತ್ರಜ್ಞಾನ ಕೆಲಸ ಮಾಡಬಲ್ಲದು.
ಇದು ನ್ಯೂರೋಲಿಂಕ್ನ ಹೊಸ ಆವಿಷ್ಕಾರವೇನಲ್ಲ. ಅಮೆರಿಕಾದ ಸಂಶೋಧಕ ವಿಲಿಯಂ ಡೊಬೆಲ್ ಎಂಬುವರು, ೨೦೦೦ರಲ್ಲಿಯೇ ಕಚ್ಚಾ ಕಾರ್ಟಿಕಲ್ ಇಂಪ್ಲಾಂಟ್ಗಳನ್ನು ಬಳಸಿ ರೋಗಿಗಳು ದಾರಿ ಹುಡುಕುವಂತೆ ಮಾಡಿದ್ದರು. ಪಾರ್ಕಿನ್ಸನ್ ರೋಗಿಯ ಮೆದುಳಿಗೆ ಎಲೆಕ್ಟ್ರೋಡ್ ಮೂಲಕ ಪ್ರಚೋದನೆ ನೀಡುವ ‘ಡೀಪ್ ಬ್ರೈನ್ ಸ್ಟಿಮ್ಯುಲೇಶನ್’ ತಂತ್ರಜ್ಞಾನ ಸಹ ೧೯೯೦ರ ದಶಕದಿಂದಲೇ ಸಾಮಾನ್ಯವಾಗಿದೆ. ನ್ಯೂರೋಲಿಂಕ್ ತಂತ್ರಜ್ಞಾನದ ಬೃಹತ್ ಪ್ರಮಾಣ ಮತ್ತು ಎಂಜಿನಿಯರಿಂಗ್ ಸಾಧ್ಯವಾಗಿಸಿತು. ಅಂದರೆ: ಅತಿ ಹೆಚ್ಚು ಎಲೆಕ್ಟ್ರೋಡ್ಗಳು, ಅವುಗಳನ್ನು ನಿಖರವಾಗಿ ಅಳವಡಿಸಲು ಒಂದು ಸರ್ಜಿಕಲ್ ರೋಬೋಟ್, ಮತ್ತು ಪ್ರಯೋಗಗಳನ್ನು ವೇಗಗೊಳಿಸಲು ಬೇಕಾದ ಅಪಾರ ಹಣ. ಅದರ ಮೊದಲ ಉತ್ಪನ್ನವಾದ ‘ಟೆಲಿಪತಿ’, ಈಗಾಗಲೇ ಪಾರ್ಶ್ವವಾಯು ಪೀಡಿತ ರೋಗಿಗಳು ಕೇವಲ ತಮ್ಮ ಆಲೋಚನೆಗಳ ಮೂಲಕ ಕಂಪ್ಯೂಟರ್ ಕರ್ಸರ್ ಅನ್ನು ಚಲಿಸುವಂತೆ ಮಾಡಿದೆ.
ಹಾಗಾದರೆ ಮೆದುಳು ನಮ್ಮ ಸಂಪೂರ್ಣ ನಿಯಂತ್ರಣಕ್ಕೆ ಸಿಕ್ಕಿಬಿಟ್ಟಿತೇ? ಪ್ರಾಣಿಗಳಲ್ಲಿ ಬೆಳಕನ್ನು ಮತ್ತು ಮನುಷ್ಯರಲ್ಲಿ ವಿದ್ಯುತ್ ಅನ್ನು ಬಳಸಿ, ನಾವು ಇಚ್ಛಿಸಿದಾಗ ಒಂದು ನಿರ್ದಿಷ್ಟ ಬಗೆಯ ನರಕೋಶವನ್ನು ಪ್ರಚೋದಿಸಲು ಅಥವಾ ನಿಲ್ಲಿಸಲು ಈಗ ನಮಗೆ ಸಾಧ್ಯವಾಗಿದೆ. ಹಿಂದೆ ಎಲ್ಲಿಂದ ಸಿಗ್ನಲ್ಗಳು ಬರುತ್ತಿದ್ದವೋ ಅದೇ ಜಾಗಕ್ಕೆ ಮತ್ತೆ ಸಿಗ್ನಲ್ಗಳನ್ನು ಕಳುಹಿಸುವ ಮೂಲಕ, ಕಳೆದುಕೊಂಡ ಇಂದ್ರಿಯವೊಂದರ ಮೂಲ ಸ್ವರೂಪವನ್ನು ಮರುಸ್ಥಾಪಿಸಲು ನಮಗೆ ಸಾಧ್ಯವಿದೆ. ಆದರೆ, ನಮಗೆ ಇನ್ನೂ ಸಾಧ್ಯವಾಗದ್ದು: ಒಬ್ಬರ ಆಲೋಚನೆಯನ್ನು ಓದುವುದು, ವ್ಯಕ್ತಿಯೊಬ್ಬನ ಮೆದುಳಿನಲ್ಲಿ ನೆನಪೊಂದನ್ನು ಬರೆಯುವುದು, ಅಥವಾ ಅವರ ನಂಬಿಕೆಗಳನ್ನು ಬದಲಾಯಿಸುವುದು. ಇಲಿಗಳ ಮೇಲಿನ ಆಪ್ಟೋಜೆನೆಟಿಕ್ ಪ್ರಯೋಗಗಳು ಯಶಸ್ವಿಯಾಗಿರುವುದು ಯಾಕೆಂದರೆ ಇಲಿಗಳ ಮೆದುಳಿನ ಸರ್ಕ್ಯೂಟ್ಗಳು ಬಹಳ ಸರಳವಾಗಿವೆ ಮತ್ತು ನಾವು ಈಗಾಗಲೇ ಅವುಗಳ ಮ್ಯಾಪಿಂಗ್ ಮಾಡಿದ್ದೇವೆ. ಮನುಷ್ಯನ ಕಾರ್ಟೆಕ್ಸ್ ಅನ್ನು ಆ ಮಟ್ಟಿಗೆ ಮ್ಯಾಪ್ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಮತ್ತು ಈ ಸಲದ ನೊಬೆಲ್ ಪ್ರಶಸ್ತಿ ಸಿಕ್ಕಿರುವುದೇ ಆ ಮ್ಯಾಪಿಂಗ್ ಕೆಲಸವನ್ನು ಮಾಡುತ್ತಿರುವ ಸಾಧನಕ್ಕೆ.
ಒಟ್ಟಿನಲ್ಲಿ ಮೆದುಳು ಇನ್ನು ಮುಂದೆ ಮುಚ್ಚಿದ ಕೋಟೆಯಲ್ಲ. ಅದರ ಬಾಗಿಲುಗಳು ತೆರೆದುಕೊಂಡಿವೆ. ವಿಜ್ಞಾನಿಗಳು ಆ ಬಾಗಿಲ ಮೂಲಕ ಒಳಹೊಕ್ಕು ಏನು ಹುಡುಕಲಿದ್ದಾರೆ ಎನ್ನುವುದೇ ಮುಂದಿನ ಐವತ್ತು ವರ್ಷಗಳ ರೋಚಕ ಕಥೆ.