ಮಧು ವೈ. ಎನ್.

01 November 2026 · ಕರುನಾಡೋತ್ಸವ · ಪ್ರಜಾವಾಣಿ

ನೋ ಕ್ಯಾಪ್ ಬ್ರೋ…!

ನೋ ಕ್ಯಾಪ್ ಬ್ರೋ…! — as printed in ಪ್ರಜಾವಾಣಿ

ನಾನು ಪ್ರಾಥಮಿಕ ಶಾಲೆಗೆ ಹೋಗುವಾಗ ನನ್ನ ಸ್ನೇಹಿತರು ‘ಅಜಾ’ ಅನ್ನುತ್ತಿದ್ದರು; ‘ಏನಜಾ, ಬಾರಜಾ’ ಅಂತ. ಹೈಸ್ಕೂಲಿಗೆ ಬಂದಾಗ ಅದು ‘ಗೆಳೆಯಾ’, ‘ಮಾಮ್ಸ್‌’ಗೆ ತಿರುಗಿತು. ಮುಂದೆ ಬೆಂಗಳೂರಿಗೆ ಬಂದೆ. ಇಲ್ಲಿ ‘ಮಗಾ’ ಅಂತೆ. ನಾನೂ ಇವರ ಥರ ಮಾತಾಡ್ಬೇಕೇನೋ ಅನ್ನುವ ಒತ್ತಡದಲ್ಲಿ ಒಂದ್ಸಲ ನನ್ನ ಸಸ್ಯಾಹಾರಿ ಸ್ನೇಹಿತನೊಬ್ಬನಿಗೆ ‘ಏನ್ ಮಗಾ’ ಅಂದಿದ್ದೆ. ಅವನು ‘ನನ್ನ ಹಂಗೆಲ್ಲ ಕರೀಬೇಡ’ ಅಂತ ಬೈದಿದ್ದ. ಅವನ ಪ್ರಕಾರ ಅದೆಲ್ಲಾ ‘ಸ್ಟ್ರೀಟ್‌ ಲ್ಯಾಂಗ್ವೇಜ್’ (ಬೀದಿ ಭಾಷೆ).

ಇವತ್ತಿನ ಕಾಲಕ್ಕೆ ಇದು ‘ಬ್ರೋ’ಗೆ ತಿರುಗಿದೆ. ಇದು ಬೀದಿಯಲ್ಲೇ ಹುಟ್ಟಿದರೂ ಈಗ ಬೀದಿಯ ಭಾಷೆಯಾಗಿ ಉಳಿದಿಲ್ಲ; ನಗರದ ಉದಾರೀಕರಣದ ಮಕ್ಕಳೂ ಇದೇ ಭಾಷೆ ಬಳಸುತ್ತಿದ್ದಾರೆ. ಇದರ ಹಾವಳಿ ಯಾವ ಮಟ್ಟಕ್ಕಿದೆ ಎಂದರೆ ಇವರಿಗೆ ಮೋದಿ, ಡಿಕೆಶಿಗಳೂ ಲೆಕ್ಕಕ್ಕಿಲ್ಲ. ಅದು ಪ್ರತಿಭಟನೆಯಾಗಲೀ, ದಸರಾ ಮೆರವಣಿಗೆಯಾಗಲೀ, ಸುಪ್ರೀಂಕೋರ್ಟಿನ ಜಡ್ಜ್ ಆಗಿರಲಿ—‘ಇಟ್ಸ್ ಡನ್ ಬ್ರೋ’ (ಕಥೆ ಮುಗೀತು ಬ್ರೋ) ಅಷ್ಟೇ.

ಹಾಗಂತ ಇದನ್ನು ಅಗೌರವ ಅಂತಲೂ ಭಾವಿಸಬೇಕಿಲ್ಲ. ಇದೊಂಥರ ಮೊಮ್ಮಗ ತಾತನ ಗಡ್ಡ ಎಳೆದಂತೆ. ಆ ಸಲಿಗೆ, ಮುಗ್ಧತೆ ಇವರಲ್ಲಿ ತುಂಬಿತುಳುಕುತ್ತಿದೆ. ಹುಟ್ಟುತ್ತಲೇ ಮೊಬೈಲ್ ಸ್ಕ್ರೀನ್ ನೋಡಿಕೊಂಡು ಬೆಳೆದವರು ಇವರು. ನಮ್ಮ ಕಾಲಕ್ಕೆ ಹಸಿವೆಂದರೆ ಅನ್ನಕ್ಕೆ ತತ್ವಾರ; ಇವರ ಕಾಲದಲ್ಲಿ ಹಸಿವೆಂದರೆ ಡೇಟಾಗೆ ತತ್ವಾರ. ಮೊನ್ನೆ ಯಾರಿಗೋ ಹೇಳುತ್ತಿದ್ದೆ—ಹಸಿವು ನಮ್ಮನ್ನು ಸಂದರ್ಭಗಳಿಗೆ ತಕ್ಕಂತೆ ಬಾಗಿಸಿತ್ತು, ಹೊಂದಿಕೊಂಡು ಹೋಗುವುದನ್ನು ಕಲಿಸಿತ್ತು; ಆದರೆ ಈಗಿನ ಮಕ್ಕಳಿಗೆ ಆ ಹಂಗಿಲ್ಲ. ಅದೇ ಅವರ ಶಕ್ತಿಯೂ ಹೌದು. ಹಾಗಾಗಿಯೇ ಇಂದು ಸರ್ಕಾರಗಳು ಇಂಟರ್‌ನೆಟ್‌ ಬಂದ್ ಮಾಡಲು ಹಿಂಜರಿಯುತ್ತವೆ.

ಕನ್ನಡದಲ್ಲಿ ಇಂಗ್ಲಿಷ್ ಬೆರೆಯುವುದು ಹೊಸತೇನಲ್ಲ. ನಮ್ಮ ತಾತಂದಿರ ಕಾಲದಲ್ಲಿ ‘ಬಸ್ಸು, ಸೈಕಲ್ಲು, ಆಫೀಸು, ಟೈಮು’ ಕೆಲಸದ ಅನಿವಾರ್ಯತೆಯಿಂದ ಕನ್ನಡದೊಳಗೆ ಬಂದು ಕುಳಿತವು. ತೊಂಬತ್ತರ ದಶಕದಲ್ಲಿ ‘ಗುರು, ಮಚ್ಚಾ, ಸಕ್ಕತ್, ಬಿಂದಾಸ್, ಉಡೀಸ್‌, ಮಟ್ಯಾಶ್‌’ ಯುವಜನರ ಗುರುತಾದವು. ನಂತರ ಬಂದ ಮಿಲೆನಿಯಲ್ ತಲೆಮಾರು ಕನ್ನಡದ ವಾಕ್ಯಗಳ ನಡುವೆ ಇಂಗ್ಲಿಷ್ ವಾಕ್ಯಗಳನ್ನು ತೂರಿಸತೊಡಗಿತು. ಇವತ್ತು ಯಾರೂ ಅಡುಗೆಮನೆ, ನಡುಮನೆ ಅನ್ನಲ್ಲ; ಹಾಲು, ಬೆಡ್‌ರೂಮು, ಕಿಚನ್‌ಗಳೇ ಕನ್ನಡವಾಗಿವೆ. ಆದರೆ ಈಗಿನ ಜೆನ್-ಝೀ ತಲೆಮಾರು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ.

ನಾನು ಆಫೀಸಿಗೆ ಮೆಟ್ರೋ ಬಳಸುತ್ತೇನೆ. ಸಂಜೆ ನಾಲ್ಕಕ್ಕೆ ಆಫೀಸಿನಿಂದ ಹೊರಟರೆ ದಾರಿಯುದ್ದಕ್ಕೂ ಮೆಟ್ರೋದಲ್ಲಿ ಜೆನ್‌-ಝೀಗಳು ಎದುರಾಗುತ್ತಾರೆ. ಸಡಿಲವಾದ ಬಟ್ಟೆ, ಕನ್ನಡಕ, ಬೆನ್ನಿಗೆ ಬ್ಯಾಗು, ಕೈಕಟ್ಟಿಕೊಂಡು ಹರಟೆಯಲ್ಲಿ ತೊಡಗಿರುವುದು ದಿನನಿತ್ಯದ ಚಿತ್ರಣ. ಅವರ ಮಾತುಗಳಿಗೆ ಕಿವಿಗೊಟ್ಟರೆ—“ನೋ ಕ್ಯಾಪ್ ಬ್ರೋ (ಸುಳ್ಳಲ್ಲ ಕಣೋ), ನಿನ್ನೆ ಆ ಜಾಗ ಮಾತ್ರ ಗೋಟೆಡ್ (ಅದ್ಭುತ) ಇತ್ತು”, “ಮೆಸೇಜ್ ಸೀನ್ ಮಾಡಿ ಘೋಸ್ಟ್ ಮಾಡ್ಬಿಟ್ಟ” (ಸಂದೇಶ ನೋಡಿಯೂ ಉತ್ತರಿಸದೆ ಕಣ್ಮರೆಯಾದ), “ಅವಳ ಜೊತೆ ವೈಬ್ ಮ್ಯಾಚ್ ಆಗ್ತಿಲ್ಲ (ಮನಸ್ಸು ಹೊಂದುತ್ತಿಲ್ಲ), ಫುಲ್ ಕ್ರಿಂಜ್ (ಮುಜುಗರ ತರುವಂತೆ) ಆಡ್ತಾಳೆ”, “ಅವನನ್ನ ಕುಕ್ ಮಾಡೋಕೆ ಬಿಡು” (ಅವನ ಕೆಲಸ ಅವನು ಮಾಡಲಿ)—ಇಂಥವೇ ಮಾತುಗಳು. ಗಮನಿಸಿದರೆ, ಇವರ ಮಾತಿನಲ್ಲಿ ಇಂಗ್ಲಿಷ್ ಅಥವಾ ಸ್ಲ್ಯಾಂಗ್ ಪದವೊಂದು ಕನ್ನಡದ್ದೇ ಧಾತುವಿನಂತೆ ವೇಷ ತೊಟ್ಟು ನಿಲ್ಲುತ್ತದೆ. ‘ಕೂಲಾಗಿರು’, ‘ಹೋಮಲ್ಲಿ’ ಎನ್ನುವಂತೆ ‘ಘೋಸ್ಟ್’, ‘ವೈಬ್’, ‘ಕ್ರಿಂಜ್’, ‘ಕುಕ್’ ಎಂಬ ಜಾಗತಿಕ ಇಂಟರ್ನೆಟ್ ಪದಗಳನ್ನು ಹಿಡಿದು ನಡೆಸುತ್ತಿರುವ ‘ಮಾಡ್ಬಿಟ್ಟ’, ‘ಆಗ್ತಿಲ್ಲ’, ‘ಆಡ್ತಾಳೆ’, ‘ಬಿಡು’ ಎಂಬ ಕೀಲುಗಳು ಮಾತ್ರ ಅಪ್ಪಟ ಕನ್ನಡದ್ದು.

ಅಂದಹಾಗೆ ಈ ಹೊಸ ಭಾಷೆಯ ತವರುಮನೆ ಇಂಗ್ಲೆಂಡ್ ಅಲ್ಲ. ಇಂದು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಹುಪಾಲು ಪದಗಳ ಮೂಲ ಇರುವುದು ಅಮೆರಿಕದ ಕಪ್ಪುವರ್ಣೀಯರ ಆಡುಭಾಷೆ ಮತ್ತು ನ್ಯೂಯಾರ್ಕಿನ ‘ಬಾಲ್‌ರೂಮ್’ ಸಂಸ್ಕೃತಿಯಲ್ಲಿ. ‘ಸ್ಲೇ’ (Slay - ಭರ್ಜರಿಯಾಗಿ ಮಿಂಚು), ‘ಇಟ್ಸ್ ಗಿವಿಂಗ್’ (It’s giving - ಆ ಥರದ ಅನುಭವ ಕೊಡುತ್ತಿದೆ) ಎಂಬ ಪದಗಳೆಲ್ಲ ಅಮೆರಿಕದ ಬೀದಿಗಳಿಂದ ಹೊರಟು, ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಗೇಮಿಂಗ್ ಲಾಬಿಗಳ ಮೂಲಕ ನೇರ ಬೆಂಗಳೂರಿನ ಕ್ಯಾಂಪಸ್ಸುಗಳನ್ನು ತಲುಪಿವೆ. ಇವತ್ತು ಹುಬ್ಬಳ್ಳಿಯ ಕಾಲೇಜು ಕಟ್ಟೆಯ ಮುಂದೆ ನಿಂತಿರುವ ಹತ್ತೊಂಬತ್ತು ವರ್ಷದ ಹುಡುಗನಿಗೂ, ಜಕಾರ್ತಾ ಅಥವಾ ನೈಜೀರಿಯಾದ ಲಾಗೋಸ್‌ನಲ್ಲಿ ಕುಳಿತಿರುವ ಹುಡುಗಿಗೂ ಒಂದೇ ಪದಕೋಶವಿದೆ. ಒಂದೇ ಮನೆಯಲ್ಲಿರುವ ಅಜ್ಜಿಗೂ ಮೊಮ್ಮಗನಿಗೂ ಇರುವ ಭಾಷಿಕ ಸಾಮ್ಯತೆಗಿಂತ, ಎರಡು ಬೇರೆ ಖಂಡಗಳಲ್ಲಿರುವ ಇಬ್ಬರು ಅಪರಿಚಿತ ಹದಿಹರೆಯದವರ ಪದಸಂಪತ್ತು ಇಂದು ಹೆಚ್ಚು ಹತ್ತಿರವಾಗಿದೆ.

ಕಳೆದ ಅಕ್ಟೋಬರಿನಲ್ಲಿ ‘ಡಿಕ್ಷನರಿ ಡಾಟ್ ಕಾಮ್’ ತನ್ನ ವರ್ಷದ ಪದವಾಗಿ ‘6-7’ (ಸಿಕ್ಸ್-ಸೆವೆನ್) ಅನ್ನು ಆರಿಸಿತು. ಮೊದಲ ಬಾರಿಗೆ ನಿಘಂಟೊಂದು ಅಕ್ಷರಗಳನ್ನು ಕೈಬಿಟ್ಟು ಅಂಕಿಗಳಿಗೆ ಶರಣಾಯಿತು. ತಮಾಷೆಯೆಂದರೆ, ಆ ನಿಘಂಟಿನ ಸಂಪಾದಕರಿಗೇ ಅದರ ನಿಖರ ಅರ್ಥ ಗೊತ್ತಿರಲಿಲ್ಲ; ನಮ್ಮ ಕಾಲದಲ್ಲಿ ‘So-so’ (ಅಷ್ಟಕ್ಕಷ್ಟೇ) ಅನ್ನುತ್ತಿದ್ದೆವಲ್ಲ, ಅದೇ ಇದರ ಭಾವ. ಇದೇ ಹೊತ್ತಲ್ಲಿ ಆಕ್ಸ್‌ಫರ್ಡ್ ನಿಘಂಟು ‘ರೇಜ್ ಬೇಟ್’ (Rage bait - ಕೆರಳಿಸಲೆಂದೇ ಹಾಕುವ ಪೋಸ್ಟ್), ಕೇಂಬ್ರಿಡ್ಜ್ ‘ಪ್ಯಾರಾಸೋಷಿಯಲ್’ (Parasocial - ಸೆಲೆಬ್ರಿಟಿಗಳ ಮೇಲಿನ ಏಕಮುಖ ಆಪ್ತತೆ) ಮತ್ತು ಕಾಲಿನ್ಸ್ ನಿಘಂಟು ‘ವೈಬ್ ಕೋಡಿಂಗ್’ (ಎಐ ಜೊತೆ ಮಾತಾಡುತ್ತಲೇ ಸಾಫ್ಟ್‌ವೇರ್ ಬರೆಯುವುದು) ಪದಗಳನ್ನು ಆರಿಸಿದವು. ಕನ್ನಡದಲ್ಲಿ ಒಂದು ಕಾಲಕ್ಕೆ ‘ಸಕ್ಕತ್’ ಮಾಡುತ್ತಿದ್ದ ಕೆಲಸವನ್ನು ಇಂದು ‘ಲೋಕೀ’ (Lowkey - ಸದ್ದಿಲ್ಲದೆ/ಒಳಗೊಳಗೇ), ‘ಎಫ್‌ಆರ್’ (FR - ನಿಜವಾಗಿಯೂ) ಮಾಡುತ್ತಿವೆ. 2023ರಲ್ಲಿ ಮೆರೆದ ‘ರಿಜ್’ (Rizz - ಆಕರ್ಷಿಸುವ ಚಾಕಚಕ್ಯತೆ) ಎಂಬ ಪದವನ್ನು ನೀವು 2026ರಲ್ಲಿ ಬಳಸಿದರೆ, ಜೆನ್-ಝೀ ಹುಡುಗರು ನಿಮ್ಮನ್ನು ಹಳೆಯ ಕಾಲದ ‘ಅಂಕಲ್’ ಎಂದು ಕನಿಕರದಿಂದ ನೋಡುತ್ತಾರೆ!

ದಿನವಿಡೀ ಪರದೆಯ ಮುಂದೆ ಬದುಕುವ ಈ ಮಕ್ಕಳಿಗೆ ತಮ್ಮ ದೇಹ ಮತ್ತು ಮನಸ್ಸುಗಳೇ ಗ್ಯಾಜೆಟ್ ಅಥವಾ ವಿಡಿಯೋ ಗೇಮ್‌ನಂತೆ ಕಾಣಿಸುತ್ತವೆ. ಹಿಂದೆ ಯಾರಾದರೂ ತಡವಾಗಿ ಅರ್ಥ ಮಾಡಿಕೊಂಡರೆ ನಾವು “ಇವನು ಟ್ಯೂಬ್‌ಲೈಟು” ಅನ್ನುತ್ತಿದ್ದೆವು; ಈಗಿನವರಿಗೆ ತಲೆ ಚಿಟ್ಟುಹಿಡಿದರೆ “ಬ್ರೈನ್ ಹ್ಯಾಂಗ್ ಆಗುತ್ತದೆ” (ಮಿದುಳು ಸ್ತಬ್ಧವಾಗುತ್ತದೆ), ಮಾತು ಮರೆತರೆ “ಬ್ರೋ ಬಫರ್ ಆಗ್ತಿದ್ದಾನೆ” ಅಥವಾ “ಲ್ಯಾಗ್ ಆಗ್ತಿದೆ” (ನೆಟ್‌ವರ್ಕ್ ಸಿಗದ ವಿಡಿಯೋದಂತೆ ತಡವರಿಸುತ್ತಿದ್ದಾನೆ) ಎನ್ನುತ್ತಾರೆ. ಜನರ ನಡುವೆ ಬೆರೆಯುವ ಚೈತನ್ಯ ಬತ್ತಿದರೆ “ಸೋಷಿಯಲ್ ಬ್ಯಾಟರಿ ಡ್ರೈನ್ ಆಗಿದೆ” (ಬೆರೆಯುವ ಉತ್ಸಾಹ ಖಾಲಿಯಾಗಿದೆ), ಬಿಡುವು ಬೇಕೆಂದರೆ “ಸಿಸ್ಟಮ್ ರೀಬೂಟ್ ಆಗ್ಬೇಕು” (ಮನಸ್ಸು ರೀಚಾರ್ಜ್ ಆಗಬೇಕು), ಭಾವನೆಯೇ ಇಲ್ಲದೆ ಮಾತಾಡಿದರೆ “ಎಐ ತರ ಮಾತಾಡ್ತಾನೆ” ಎಂಬ ಹೋಲಿಕೆ.

ಇನ್ನು ವಿಡಿಯೋ ಗೇಮ್‌ಗಳು ಇವರ ಜೀವನದೃಷ್ಟಿಯನ್ನೇ ರೂಪಿಸಿವೆ. ಸ್ವಂತ ಬುದ್ಧಿಯಿಲ್ಲದೆ ಗುಂಪಿನಲ್ಲಿ ಗೋವಿಂದ ಎನ್ನುವವರು ಇವರಿಗೆ ‘ಎನ್‌ಪಿಸಿ’ (NPC - ಗೇಮ್‌ಗಳಲ್ಲಿ ಕಂಪ್ಯೂಟರ್ ನಿಯಂತ್ರಿಸುವ ಹಿನ್ನೆಲೆ ಪಾತ್ರ). ಬದುಕಿನ ಸಣ್ಣಪುಟ್ಟ ಅಲೆದಾಟಗಳೆಲ್ಲ ‘ಸೈಡ್ ಕ್ವೆಸ್ಟ್’ಗಳು (ಮುಖ್ಯ ಗುರಿಯ ನಡುವಿನ ಸಣ್ಣಪುಟ್ಟ ಸಾಹಸಗಳು). ಗೆಲುವು ಮತ್ತು ಸೋಲುಗಳನ್ನು ‘ಡಬ್ಲ್ಯೂ’ (W - Win/ಗೆಲುವು) ಮತ್ತು ‘ಎಲ್’ (L - Loss/ಸೋಲು) ಎಂಬ ಒಂದೇ ಅಕ್ಷರದಲ್ಲಿ ಅಳೆದು ಮುಗಿಸುತ್ತಾರೆ. ಕಳೆದ ವರ್ಷ ಇಂಡೋನೇಷ್ಯಾದ ದೋಣಿ ಸ್ಪರ್ಧೆಯೊಂದರಲ್ಲಿ ನಲವತ್ತು ಜನ ಬೆವರು ಸುರಿಸಿ ಹುಟ್ಟು ಹಾಕುತ್ತಿದ್ದರೆ, ಹನ್ನೊಂದು ವರ್ಷದ ಹುಡುಗನೊಬ್ಬ ತುದಿಯಲ್ಲಿ ಕಪ್ಪು ಕನ್ನಡಕ ಹಾಕಿಕೊಂಡು ಸ್ಟೈಲಾಗಿ ನಿಂತು ಪೋಸ್ ಕೊಡುತ್ತಿದ್ದ. ಜೆನ್-ಝೀಗಳು ಅದಕ್ಕೆ ತಕ್ಷಣ ಕೊಟ್ಟ ಹೆಸರು—‘ಆರಾ ಫಾರ್ಮಿಂಗ್’ (Aura farming). ಅಂದರೆ ಸುತ್ತ ಏನೇ ಗದ್ದಲ ನಡೆಯುತ್ತಿದ್ದರೂ ತಾನು ಮಾತ್ರ ಕೂಲ್ ಆಗಿ ಕಾಣಿಸಿಕೊಂಡು ಮೆಚ್ಚುಗೆಯ ‘ಪಾಯಿಂಟ್ಸ್’ ದೋಚುವುದು! ನಾಲ್ಕು ಜನರ ಮುಂದೆ ಎಡವಟ್ಟು ಮಾಡಿಕೊಂಡರೆ ಅದು ‘ಮೈನಸ್ ತೌಸೆಂಡ್ ಆರಾ’ (ಇದ್ದ ಮರ್ಯಾದೆ ಹೋಯಿತು). ನಾವು “ಬೆಣ್ಣೆ ಹಚ್ಚಬೇಡ” ಎಂದರೆ, ಇವರು ಡೋನಟ್ ಮೇಲಿನ ಸಕ್ಕರೆ ಪಾಕ ನೆನಪಿಸುತ್ತಾ “ಜಾಸ್ತಿ ಗ್ಲೇಜ್ (Glaze - ಹೊಗಳಿಕೆಯ ಪಾಕ) ಮಾಡ್ಬೇಡ” ಎನ್ನುತ್ತಾರೆ. ಯಾರದಾದರೂ ಹಳೆಯ ಕಥೆ ಕೆದಕುವುದಕ್ಕೆ ‘ಲೋರ್’ (Lore - ಹಿನ್ನೆಲೆ ಕಥೆ) ಎಂದರೆ, ಹೊಸ ಪ್ರೇಮಿಯ ಮುಖ ತೋರಿಸದೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೀ ಅವರ ಕೈಯನ್ನೋ ಕಾಫಿ ಲೋಟವನ್ನೋ ಹಾಕಿ ಸುಳಿವು ಕೊಡುವುದಕ್ಕೆ ಸಾಫ್ಟ್‌ವೇರ್ ಶೈಲಿಯಲ್ಲಿ ‘ಸಾಫ್ಟ್ ಲಾಂಚ್’ (ಅಧಿಕೃತ ಘೋಷಣೆಗೂ ಮುನ್ನ ಕೊಡುವ ಸುಳಿವು) ಎನ್ನುತ್ತಾರೆ! ಜೊತೆಗೆ ಮನೋವಿಜ್ಞಾನದ ಕೋಣೆಯಲ್ಲಿದ್ದ ‘ಟಾಕ್ಸಿಕ್’ (ವಿಷಕಾರಿ ಗುಣ), ‘ಗ್ಯಾಸ್‌ಲೈಟಿಂಗ್’ (ನಮ್ಮದೇ ತಪ್ಪೆಂದು ನಂಬಿಸಿ ಮರುಳು ಮಾಡುವುದು), ‘ಟ್ರಾಮಾ ಡಂಪಿಂಗ್’ (ನೋವನ್ನೆಲ್ಲ ಇನ್ನೊಬ್ಬರ ಮೇಲೆ ಸುರಿಯುವುದು), ‘ಡೆಲುಲು’ (Delusional - ಭ್ರಮೆ), ‘ರೆಡ್ ಫ್ಲ್ಯಾಗ್’ (ಅಪಾಯದ ಮುನ್ಸೂಚನೆ), ‘ಗ್ರೀನ್ ಫ್ಲ್ಯಾಗ್’ (ನಂಬಿಕೆಗೆ ಅರ್ಹ) ಎಂಬ ಗಂಭೀರ ಪದಗಳೆಲ್ಲ ಟೀ ಕುಡಿಯುತ್ತಾ ಸ್ನೇಹಿತರ ಗುಣ ಅಳೆಯುವ ದಿನಬಳಕೆಯ ಪದಗಳಾಗಿವೆ.

ಬಾಲ್ಯದಲ್ಲಿ ನಾವು ದೊಡ್ಡವರಿಗೆ ಅರ್ಥವಾಗಬಾರದೆಂದು ‘ಪ ಭಾಷೆ’ಯಲ್ಲಿ ಮಾತಾಡುತ್ತಿದ್ದೆವು. ಆದರೆ ಜೆನ್-ಝೀ ಕಟ್ಟಿಕೊಂಡಿರುವ ಗುಪ್ತಭಾಷೆಯ ಪ್ರೇಕ್ಷಕ ಮನುಷ್ಯನಲ್ಲ, ಸಾಫ್ಟ್‌ವೇರ್! ಜಾಲತಾಣಗಳ ಫಿಲ್ಟರ್‌ಗಳು ಕೆಲವು ಪದಗಳಿರುವ ವಿಡಿಯೋಗಳನ್ನು ತಡೆಹಿಡಿಯುತ್ತವೆ ಎಂದು, ಇವರು ‘ಕಿಲ್’ (ಕೊಲ್ಲು) ಬದಲು ‘ಅನ್‌ಅಲೈವ್’ (Unalive - ಜೀವಂತವಿಲ್ಲದಂತೆ ಮಾಡು), ‘ಸೆಕ್ಸ್’ ಬದಲು ‘ಸೆಗ್ಸ್’ (Seggs) ಅಥವಾ ಜೋಳದ ತೆನೆಯ ಎಮೋಜಿ (🌽) ಬಳಸುತ್ತಾರೆ. ಇವರ ಚಾಟಿಂಗ್ ವ್ಯಾಕರಣವೂ ವಿಚಿತ್ರ. ವಾಟ್ಸ್‌ಆ್ಯಪ್‌ನಲ್ಲಿ ‘Okay.’ ಎಂದು ಬರೆದು ಕೊನೆಯಲ್ಲೊಂದು ಚುಕ್ಕೆ ಇಟ್ಟರೆ ನೀವು ಕೆಂಡಾಮಂಡಲ ಕೋಪದಲ್ಲಿದ್ದೀರಿ ಎಂದರ್ಥ! ನಾವು ಬಳಸುವ ನಗುವಿನ ಎಮೋಜಿ (😂) ಇವರ ಕಣ್ಣಲ್ಲಿ ಅಜ್ಜಂದಿರ ಕಾಲದ್ದು; ಇವರಿಗೆ ವಿಪರೀತ ನಗು ಬಂದರೆ ತಲೆಬುರುಡೆಯ ಎಮೋಜಿ (💀) ಅಥವಾ ಅಳುವ ಎಮೋಜಿ (😭) ಬರಬೇಕು. ‘ಟಿಬಿಹೆಚ್’ (TBH - ಪ್ರಾಮಾಣಿಕವಾಗಿ ಹೇಳಬೇಕೆಂದರೆ), ‘ಎನ್‌ಜಿಎಲ್’ (NGL - ಸುಳ್ಳು ಹೇಳಲ್ಲ), ‘ಐವೈಕೆವೈಕೆ’ (IYKYK - ಗೊತ್ತಿರುವವರಿಗೆ ಮಾತ್ರ ಗೊತ್ತು), ‘ಫೊಮೊ’ (FOMO - ನಾನೊಬ್ಬನೇ ತಪ್ಪಿಸಿಕೊಳ್ಳುತ್ತಿದ್ದೇನೆ ಎಂಬ ಚಡಪಡಿಕೆ) ಎಂಬ ಒಗಟಿನಂತಹ ಅಕ್ಷರಗಳಲ್ಲೇ ಇವರ ಸಂಭಾಷಣೆ ಮುಗಿದುಹೋಗುತ್ತದೆ.

ಆದರೆ ಇದೇ ಇಡೀ ಜಗತ್ತು ಅಂತಲೂ ಅಲ್ಲ. ನಾನು ಹಲವು ಶಿಕ್ಷಕರೊಂದಿಗೆ ಮಾತಾಡಿದ್ದೇನೆ. ಕನ್ನಡದ ಗ್ರಾಮೀಣ ಮಕ್ಕಳು ತೀರಾ ಈ ನಗರದ ಜೆನ್‌-ಝೀಯ ಗುಣಗಳನ್ನು ಆವಾಹಿಸಿಕೊಂಡಿಲ್ಲ. ಇಲ್ಲೊಂದು ದೊಡ್ಡ ಕಂದಕವಿದೆ. ಅದು ಹೇಗೆ, ಅದು ಯಾಕೆ ಎಂದು ನನಗೂ ಸಾಮಾಜಿಕ ಕಾರಣಗಳು ಗೊತ್ತಿಲ್ಲ. ಯಾಕೆಂದರೆ ಕೈನಲ್ಲಿ ಫೋನು, ಫೋನಲ್ಲಿ ಇಂಟರ್‌ನೆಟ್‌ ಇದ್ದಮೇಲೆ ಇಡೀ ಜಗತ್ತೇ ಒಂದು ಅನ್ನುವಂತಿರಬೇಕಲ್ಲ? ನನಗನ್ನಿಸುತ್ತೆ, ಈ ಎರಡೂ ಗುಂಪುಗಳ ನಡುವೆ ಸಂವಹನವಿಲ್ಲ. ಇದ್ದಿದ್ದರೆ ಅಲ್ಲಿಯದು ಇಲ್ಲಿಗೆ, ಇಲ್ಲಿಯದು ಅಲ್ಲಿಗೆ ಬಾಯಿ-ಬದಲಾವಣೆ ಆಗೇ ಆಗಿರುತ್ತಿತ್ತು.

The piece continues across 2 pages as printed.

ನೋ ಕ್ಯಾಪ್ ಬ್ರೋ…! — page 2 as printed in ಪ್ರಜಾವಾಣಿ