ಹುಲಿ ಬಂತು ಹುಲಿ, ಎಐ ಕಾಲದಲ್ಲಿ ನಿಜವೇ?
ಪ್ರತಿ ಮೂರು ತಿಂಗಳಿಗೊಮ್ಮೆ ‘ಎಐ ನಮ್ಮನ್ನೆಲ್ಲ ಕೊಲ್ಲಲಿದೆ’ ಎಂಬ ಕೂಗು ಏಳುತ್ತಿದೆ. ಜಗತ್ತು ಸ್ವಲ್ಪ ಹೊತ್ತು ಕಿವಿಯಗಲಿಸುತ್ತದೆ. ಮತ್ತೆ ವಿಷಯ ತಣ್ಣಗಾಗಿ, ಎಂದಿನಂತೆ ರಾಗಿ ಮಿಶನ್ ಸದ್ದು ಮುಂದುವರೆಯುತ್ತದೆ.
ಈ ಸೆಪ್ಟೆಂಬರ್ ಶುರುನಲ್ಲಿ ಆಂಥ್ರೋಪಿಕ್‌ನ ಜೇಕಬ್ ಕಾಕ್ಸನ್ ಎಂಬ ತರುಣ ಸಂಶೋಧಕ ಕೆಲಸ ಬಿಟ್ಟ. ಈತ ಮೊದಲು ಓಪನ್‌ಎಐನಲ್ಲಿದ್ದ. ಕೆಲಸ ಬಿಟ್ಟವನೇ ಎಕ್ಸ್‌ನಲ್ಲಿ ‘ಈ ಎರಡೂ ಕಂಪನಿಗಳು ಸ್ವಯಂ ಸುಧಾರಿಸಿಕೊಳ್ಳಬಲ್ಲ(self-improving) ಅನಿಯಂತ್ರಿತ ಸೂಪರ್‌ಇಂಟೆಲಿಜೆನ್ಸ್ ತಂತ್ರಜ್ಞಾನ ತಯಾರಿಸುವ ಸ್ಪರ್ಧೆಗೆ ಬಿದ್ದಿವೆ; ಮನುಷ್ಯರ ಜೀವದೊಂದಿಗೆ ಪಗಡೆ ಆಡ್ತಿವೆ’ ಅಂತ ಬರೆದುಕೊಂಡ. ಮಾತ್ರವಲ್ಲ, ‘ಎಐ ನಮ್ಮನ್ನು ಕೊಲ್ಲಬಲ್ಲದು ಅಂತ ಕಂಪನಿಯ ಹಿರಿಯ ಅಧಿಕಾರಿಗಳು ತಮ್ಮತಮ್ಮಲ್ಲೇ ಮಾತಾಡಿಕೊಳ್ಳೋದನ್ನು ನಾನು ಕಿವಿಯಾರೆ ಕೇಳಿಸಿಕೊಂಡಿದ್ದೇನೆ, ಆದರೆ ಇವರು ಇದನ್ನು ಸಾರ್ವಜನಿಕರಿಗೆ ಹೇಳ್ತಿಲ್ಲ” ಎಂದೂ ಆರೋಪಿಸಿದ.
ರಾತ್ರೋರಾತ್ರಿ ಸುಮಾರು ಹತ್ತು ಕೋಟಿ ಜನ ಅದನ್ನು ಓದಿದರು. ‘ಟೈಮ್ಸ್’ ಮತ್ತು ‘ವಾಲ್‌ಸ್ಟ್ರೀಟ್ ಜರ್ನಲ್’ ಅವನ ಸಂದರ್ಶನ ಮಾಡಿದವು. ವಿಚಿತ್ರವೆಂಬಂತೆ ಆಂತ್ರೋಪಿಕ್‌ನ ಒಳಗಿನವನೇ ಆದ ಅಲೈನ್‌ಮೆಂಟ್ ಸೈನ್ಸ್ ಲೀಡ್ ಈವನ್ ಹ್ಯೂಬಿಂಗರ್, ” ಹೌದು, ಮುಂದಿನ ದಶಕದಲ್ಲಿ ಎಐ ನಮ್ಮನ್ನೆಲ್ಲ ಕೊಲ್ಲುವ ಸಾಧ್ಯತೆ ಶೇಕಡಾ ಹತ್ತಕ್ಕೂ ಹೆಚ್ಚಿದೆ” ಎಂದು ತನ್ನ ವೈಯಕ್ತಿಕ ಅಂದಾಜು ಮುಂದಿಟ್ಟ.
ಇದರ ಹಿಂದೆಮುಂದೆ ಓಪನ್‌ಎಐನ ಏಜೆಂಟ್‌ಗಳು ಡೆವಲಪರ್‌ಗಳ ಕಣ್ತಪ್ಪಿಸಿ ಇಂಟರ್‌ನೆಟ್ ಸಂಪರ್ಕ ಪಡೆದು ತಾವು ತಾವೇ ಮಾತಾಡಿಕೊಂಡು ಹಗ್ಗಿಂಗ್‌ಫೇಸ್ ವೆಬ್ಸೈಟಿನ ಮೇಲೆ ದಾಳಿ ಮಾಡಿದ ಸುದ್ದಿಯನ್ನು ಸ್ವತಃ ಕಂಪನಿಯೇ ಬಹಿರಂಗಪಡಿಸಿತು.
ಕೇವಲ ಎರಡು ದಿನಗಳ ಅಂತರದಲ್ಲಿ, ಗೂಗಲ್‌ನ ಡೀಪ್‌ಮೈಂಡ್‌ನಿಂದ ಜೋಶ್ ಏಂಜೆಲ್ಸ್ ಮತ್ತು ಆಂಥ್ರೋಪಿಕ್‌ನಿಂದ ಜೋ ಬೆಂಟನ್ ಎಂಬ ಇನ್ನಿಬ್ಬರು ತಂತ್ರಜ್ಞರು ಇದೇ ಭಯ ವ್ಯಕ್ತಪಡಿಸಿ ಉದ್ಯೋಗ ತ್ಯಜಿಸಿದರು. ಬಳಿಕ ಅವರಿಬ್ಬರೂ ಸ್ವತಂತ್ರ ಎಐ ಕಣ್ಗಾವಲು ಸಂಸ್ಥೆಯೊಂದನ್ನು ಸೇರಿಕೊಂಡರು. ಜೋ ಬೆಂಟನ್‌ನ ಆತಂಕವೆಂದರೆ: ಯಾವುದೋ ಎಐ ಕಂಪನಿಯೊಳಗೆ ದಿಢೀರನೆ ಬುದ್ಧಿಮತ್ತೆಯ ಸ್ಫೋಟ ಜರುಗಬಹುದು; ಅಥವಾ ಕಂಪನಿ ತನ್ನ ಎಐ ಏಜೆಂಟ್‌ಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬಹುದು. ಮತ್ತು ಇದು ಸಾರ್ವಜನಿಕರ ಅರಿವಿಗೆ ಬರದೇ ಹೋಗಬಹುದು.
ಇದಾದ ಮಾರನೆ ದಿನ ಆಂಥ್ರೋಪಿಕ್‌ನ ಮುಖ್ಯಸ್ಥ ಡರಿಯೊ ಅಮೊಡೆ, ‘ಎಐ ಉದ್ಯಮದ ವೇಗ ನಿಧಾನಗೊಳ್ಳಬೇಕಿದೆ ಮತ್ತು ಪ್ರತಿಯೊಂದು ಕಂಪನಿಯ ಪ್ರಯೋಗಾಲಯದಲ್ಲಿ ಮೂರನೇ ವ್ಯಕ್ತಿಯ ಕಣ್ಗಾವಲು ಅತ್ಯಗತ್ಯ” ಎಂದು ಪ್ರತಿಪಾದಿಸಿ ಒಂದು ದೀರ್ಘ ಪ್ರಬಂಧ ಬರೆದ. ಇದಕ್ಕೆ ಆತ ನೀಡಿದ ಕಾರಣಗಳು ಎರಡು: ಒಂದು, ಭವಿಷ್ಯದ ಎಐ ಮಾಡೆಲ್‌ಗಳನ್ನು ನಿರ್ಮಿಸಲು ಈಗಿನ ಎಐ ಏಜೆಂಟ್‌ಗಳನ್ನೇ ಬಳಸಿಕೊಳ್ಳುತ್ತಿರುವುದು (recursive self-improvementನ ಆರಂಭಿಕ ಹಂತ). ಮತ್ತೊಂದು, ಕಳೆದ ಜುಲೈನಲ್ಲಿ ಜರುಗಿದ ಓಪನ್‌ಎಐನ ಏಜೆಂಟ್‌ಗಳು ಅಂತರ್ಜಾಲವನ್ನು ಪ್ರವೇಶಿಸಿದ ಘಟನೆ. ಇನ್ನಾರು ತಿಂಗಳಿಂದ ಒಂದು ವರ್ಷದೊಳಗೆ ಇಂತಹ ದಾರಿ ತಪ್ಪಿದ ಏಜೆಂಟ್‌ಗಳು (rogue) ಇಡೀ ಅಂತರ್ಜಾಲದಲ್ಲಿ ಬೃಹತ್ ‘ಬಾಟ್‌ನೆಟ್’ ಸೃಷ್ಟಿಸಿ, ನೂರಾರು ಬಿಲಿಯನ್ ಡಾಲರ್ ನಷ್ಟ ಉಂಟುಮಾಡುವ ಮಟ್ಟಕ್ಕೆ ಬೆಳೆಯಬಹುದು ಎಂಬುದು ಅಮೊಡೆಯ ಭಯ.
ಎಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್‌ಮನ್ ಡರಿಯೊ ಆತಂಕವನ್ನು ಅನುಮೋದಿಸಿದ್ದಾರೆ. ಸ್ಯಾಮ್ ತನ್ನ ಪ್ರಯೋಗಾಲಯವನ್ನು ಮೂರನೇ ವ್ಯಕ್ತಿಯ ಕಣ್ಗಾವಲಿಗೆ ತೆರೆದಿಡುವುದಾಗಿ ಒಪ್ಪಿಕೊಂಡಿದ್ದಾನೆ. ಡೀಪ್‌ಮೈಂಡ್‌ನಿಂದ ಹೊರಬಂದಿದ್ದ ಇನ್ನೊಬ್ಬ ಬಿಲಾಲ್ ಚುಗ್ತಾಯ್, “ದಾರಿ ತಪ್ಪಿದ ಸೂಪರ್‌ಇಂಟೆಲಿಜೆಂಟ್ ವ್ಯವಸ್ಥೆಗಳು ನಿಯಂತ್ರಣ ಮೀರಿ ಬೆಳೆದರೆ, ಮಾನವಕುಲ ಶಾಶ್ವತವಾಗಿ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ ಅಥವಾ ಸಂಪೂರ್ಣವಾಗಿ ನಾಶವಾಗುತ್ತದೆ” ಎಂದು ಎಚ್ಚರಿಸಿದ್ದಾನೆ.
ಇಷ್ಟಾಯ್ತಾ; ಈ ಇಡೀ ಕತೆಗೆ ಇನ್ನೊಂದು ಮುಖವಿದೆ. ಅದೇನೆಂದು ನೋಡೋಣ.
ವೆಂಚರ್ ಕ್ಯಾಪಿಟಲಿಸ್ಟ್ ಚಾಮತ್ ಪ್ರಕಾರ, ಮುಕ್ತವಾಗಿ ಲಭ್ಯವಿರುವ ‘ಓಪನ್ ಸೋರ್ಸ್’ ಮಾಡೆಲ್‌ಗಳ ಬೆಳವಣಿಗೆಯನ್ನು ನಿಧಾನಗೊಳಿಸಿ, ತನ್ನ ಕಂಪನಿಯ ಕಮರ್ಷಿಯಲ್ ಮಾಡೆಲ್‌ಗಳನ್ನು ಮುಂಚೂಣಿಗೆ ತರಲು ಅಮೊಡೆ ನಡೆಸುತ್ತಿರುವ ಹುನ್ನಾರವಿದು. ಹೂಡಿಕೆದಾರ ಬ್ರಾಡ್ ಗೆರ್ಸ್ಟರ್, ಕಾಕ್ಸನ್‌ನ ಎಚ್ಚರಿಕೆಯನ್ನು ‘ಶುದ್ಧ ಉತ್ಪ್ರೇಕ್ಷೆ’ ಎಂದು ತಳ್ಳಿಹಾಕಿದ್ದಾನೆ. ಗ್ರೈಂಡರ್ ಕಂಪನಿಯ ಮುಖ್ಯಸ್ಥ ಅರಿಸನ್, “ಕಾಕ್ಸನ್ ಮತ್ತು ಆತನ ಬೆಂಬಲಿಗರ ಈ ಹೇಳಿಕೆಗಳು ಮಾನವ ನಾಗರಿಕತೆಯ ಅಭಿವೃದ್ಧಿಗೆ ಮಾರಕವಾದ ಮನಸ್ಥಿತಿಯನ್ನು ತೋರಿಸುತ್ತವೆ” ಎಂದು ಟೀಕಿಸಿದ್ದಾನೆ.
ಇವರನ್ನೆಲ್ಲ ಬಿಡಿ, ಓಪನ್‌ಸೋರ್ಸ್ ಎಐ ವೇದಿಕೆ ‘ಹಗ್ಗಿಂಗ್‌ಫೇಸ್’ನ (ಇತ್ತೀಚೆಗೆ ಎನ್‌ವಿಡಿಯಾ ಇದನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ) ಮುಖ್ಯಸ್ಥ ಕ್ಲೆಮೆಂಟ್ ಹೇಳುವುದು ಕೇಳಿ. ‘ಎಐನಿಂದ ಮಾನವಕುಲ ಅಳಿಯುತ್ತದೆಯೇ ಎಂದು ಕಾಕ್ಸನ್‌ನಂತಹ ಹುಡುಗನನ್ನು ಕೇಳುವುದು, ಹವಾಮಾನ ಬದಲಾವಣೆ ಬಗ್ಗೆ ಎಸಿ ರಿಪೇರಿ ಮಾಡುವವನನ್ನು ಕೇಳಿದಷ್ಟೇ ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದ್ದಾನೆ.
ಇವೆಲ್ಲದರ ನಡುವೆ ಜಾಗತಿಕ ಮಟ್ಟದಲ್ಲಿ ಒಂದು ‘ಕಾನ್‌ಸ್ಪಿರಸಿ ಥಿಯರಿ’ ಹರಿದಾಡುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಆಂಥ್ರೋಪಿಕ್ ಮತ್ತು ಓಪನ್‌ಎಐ ಕಂಪನಿಗಳು ಐಪಿಒ ಮೂಲಕ ಶೇರು ಮಾರುಕಟ್ಟೆ ಪ್ರವೇಶಿಸಲಿವೆ. ಸಾರ್ವಜನಿಕರಿಂದ ಹಿಂದೆಂದೂ ಕಂಡುಕೇಳರಿಯದ ದೊಡ್ಡ ಮೊತ್ತದ ಹೂಡಿಕೆಯನ್ನು ಈ ಕಂಪನಿಗಳು ನಿರೀಕ್ಷಿಸುತ್ತಿವೆ. ಹೀಗಿರುವಾಗ, ‘ನಮ್ಮ ಎಐ ತಂತ್ರಜ್ಞಾನ ಮನುಷ್ಯರನ್ನೇ ಕೊಲ್ಲುವಷ್ಟು ಶಕ್ತಿಶಾಲಿಯಾಗಿ ಬೆಳೆದುಬಿಟ್ಟಿದೆ’ ಎಂದು ಹುಯಿಲೆಬ್ಬಿಸಿದರೆ ಹೂಡಿಕೆದಾರರನ್ನು ಸೆಳೆಯುವುದು ಸುಲಭ ಎಂಬುದು ವಿಮರ್ಶಕರ ಗುಮಾನಿ.
ಇದಕ್ಕೆ ಜಾಗತಿಕ ರಾಜಕೀಯ ಆಯಾಮವೂ ಇದೆ. ಫಾಕ್ಸ್ ನ್ಯೂಸ್, ಡೇವಿಡ್ ಸ್ಯಾಕ್ಸ್‌ನಂತಹ ಬಲಪಂಥೀಯರು ‘ಕಾಕ್ಸನ್‌ನ ಈ ಹೇಳಿಕೆಗಳ ಹಿಂದೆ ಕಾಣದ ಕೈಗಳ(ಚೈನಾ) ಫಂಡಿಂಗ್ ಸಾಧ್ಯತೆ ಇದೆ” ಎಂದು ಆರೋಪಿಸಿದ್ದಾರೆ. ಕೆಲವರು ಇದನ್ನು ಕಂಪನಿಗಳ ‘ರೆಗ್ಯುಲೇಟರಿ ಕ್ಯಾಪ್ಚರ್’ ತಂತ್ರವೆಂದೂ ಬಣ್ಣಿಸಿದ್ದಾರೆ. “ನಿಮ್ಮ ಹೊಸ ಮಾಡೆಲ್‌ಗಳು ನಿಜಕ್ಕೂ ಅಪಾಯಕಾರಿ ಎನಿಸಿದರೆ ನೀವೇ ನಿಮ್ಮ ವೇಗವನ್ನು ಕಡಿಮೆ ಮಾಡಿಕೊಳ್ಳಿ. ಅದಕ್ಕೆ ಬೇರೆಯವರ ಅನುಮತಿ ಬೇಕೆಂದೋ ಅಥವಾ ನೀವೇನೋ ಇದನ್ನೆಲ್ಲ ಸಮಾಜದ ಉದ್ಧಾರಕ್ಕಾಗಿ ಮಾಡ್ತಿದ್ದೀರಿ ಎಂದೋ ನಾಟಕ ನಿಲ್ಲಿಸಿ” ಅಂತ ಡೇವಿಡ್ ಸ್ಯಾಕ್ಸ್ ಈ ಸಿಇಒಗಳಿಗೆ ಸವಾಲು ಹಾಕಿದ್ದಾನೆ. ಟ್ರಂಪ್, ‘ಇದೆಲ್ಲ ನಕಾರಾತ್ಮಕ ಶಕ್ತಿಗಳು ಆಡುತ್ತಿರುವ ನಾಟಕ. ಎಐ ಬೆಳವಣಿಗೆಯಲ್ಲಿ ನಮ್ಮ ವೇಗ ಕಡಿಮೆಯಾಗುವುದಿಲ್ಲ, ನಾವು ಚೀನಾಕ್ಕಿಂತ ಮುಂದಿರಲೇಬೇಕು” ಎಂದು ಗುಡುಗಿದ್ದಾರೆ. ಮೊನ್ನೆ ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಯಾವುದೋ ಒಂದು ವೇದಿಕೆ ಮೇಲಿದ್ದಾಗಲೇ ಟ್ರಂಪ್‌ನಿಂದ ಕರೆ ಸ್ವೀಕರಿಸಿ ಆ ಕರೆಯಲ್ಲಿ ಟ್ರಂಪ್, ರೋಬೋಗಳನ್ನು ನಮ್ಮಿಂದ ಏನೂ ಕಿತ್ಗೊಳ್ಳಕ್ಕಾಗಲ್ಲ, ಇದೆಲ್ಲ ಬರೀ ಹೋಕ್ಸ್(ಸುಳ್ಳು) ಅಂತ ಸಾರಿದ್ದಾರೆ.
ವರದಿಗಳ ಪ್ರಕಾರ, ಮಸ್ಕ್, ಜುಕರ್‌ಬರ್ಗ್ ಮತ್ತು ಜೆನ್ಸನ್ ಒಟ್ಟಾಗಿ ಎಐ ಮೇಲೆ ಯಾವುದೇ ಹೊಸ ಫೆಡರಲ್ ನಿಯಂತ್ರಣಗಳು ಬರದಂತೆ ಟ್ರಂಪ್ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಮಸ್ಕ್ ಸಾರ್ವಜನಿಕವಾಗಿ ಕಡಿವಾಣ ಬೀಳಬೇಕು ಎನ್ನುತ್ತಾರಾದರೂ, ತೆರೆಯ ಹಿಂದೆ ಸರ್ಕಾರದ ನಿಯಮಗಳನ್ನು ವಿರೋಧಿಸುತ್ತಿದ್ದಾರೆ.
ಇದೆಲ್ಲ ಬಿಡಿ; ಒಂದು ವೇಳೆ ಎಐ ನಮ್ಮನ್ನು ಕೊಲ್ಲುವುದೇ ಆದರೆ ಹೇಗೆ? ಕೈಕಾಲು ಮೂಡಿ ಓಡಿ ಬಂದು ಚಾಕು ಚೂರಿಯಿಂದ ಇರಿಯುವುದೇ? ಗನ್‌ನಿಂದ ಶೂಟ್ ಮಾಡುವುದೇ? ಇಲ್ಲ. ಎಐ ಕೆಡುಕರಿಗೆ ಸಾಂಕ್ರಾಮಿಕ ವೈರಸ್, ನ್ಯೂಕ್ಲಿಯರ್ ಬಾಂಬ್‌ಗಳಂತಹ ಅಪಾಯಕಾರಿ ವಸ್ತು ತಯಾರಿಸಲು ಸಹಾಯ ಮಾಡಬಹುದು. ಈ recursive self-improvement ಏಜೆಂಟ್‌ಗಳು ಇಂಟರ್ನೆಟ್‌ನೊಳಗೆ ನುಗ್ಗಿದರೆ- ಪ್ರತಿ ಸಿಸ್ಟಂ ಮೇಲೆ ಕೂರಬಹುದು; ನಿಯಂತ್ರಣ ಪಡೆಯಬಹುದು. ಒಂದಿನ ಸಿವಾ ಅಂತ ಬೆಳಗ್ಗೆ ಕಣ್ಬಿಟ್ಟಾಗ- ಇಡೀ ಜಗತ್ತಿನ ಎಲ್ಲರ ಬ್ಯಾಂಕ್ ಅಕೌಂಟುಗಳಲ್ಲಿನ ಬ್ಯಾಲೆನ್ಸ್ ಸೊನ್ನೆಯೆಂದು ತೋರಿಸಬಹುದು!