ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!
ಕೃತಕ ಬುದ್ಧಿಮತ್ತೆ ಅಥವಾ ಎ.ಐ ಉದ್ಯೋಗ ಕಡಿತದಂತಹ ಅಪಾಯಗಳನ್ನು ಸೃಷ್ಟಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದು ನಿಜವೇ? ಯುವ ತಲೆಮಾರಿನ ಉದ್ಯೋಗ ಭವಿಷ್ಯಕ್ಕೆ ಎ.ಐ ಕುತ್ತಾಗಲಿದೆಯೇ?
ಹೌದು ಇದು ನಿಜ. ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗಗಳು ಕಡಿತವಾಗಲಿವೆ. ಎಐ ಎಂದರೆ ಮನುಷ್ಯನಂತೆ ಯೋಚಿಸುವ ಮೆದುಳು, ಕಂಪ್ಯೂಟರ್ ಎಂದರೆ ಪುನರಾವರ್ತಿತ ಕೆಲಸಗಳನ್ನು ಮಾಡುವ ಲೇಬರ್. ಎರಡೂ ಸೇರಿದರೆ ಇದು ಬಹುತೇಕ ಎಲ್ಲಾ ಕಡೆ ಲಗ್ಗೆ ಇಡಬಹುದು. ಕಾಲ್ಸೆಂಟರ್ನಂತಹ ಉದ್ಯೋಗಗಳು ಸಂಪೂರ್ಣ ನಶಿಸಿಹೋಗಬಹುದು. ಇದರ ನೇರ ಪರಿಣಾಮ ಯುವತಲೆಮಾರಿನ ಮೇಲೆಯೇ ಬೀರಲಿದೆ.
ಕಾಲಾನಂತರ ಸರಿಹೋಗತ್ತೆ, ಹೊಸ ಉದ್ಯೋಗ, ಉದ್ಯಮಗಳು ಸೃಷ್ಟಿಯಾಗ್ತವೆ. ಆದರೆ ಈ ಸ್ಥಿತ್ಯಂತರ ವೇಗ ಇದೆಯಲ್ಲಾ ಅದು ಹಿಂದೆಂದೂ ಕಂಡಿರದ್ದು. ಸದ್ಯದ ಯುವ ತಲೆಮಾರು ಖಂಡಿತ ಕಂಗಾಲಾಗಲಿದೆ. ಯಾಕಂದರೆ ಇವರನ್ನೆಲ್ಲ ನಾವು ‘ಇಲ್ಲದ’ ಉದ್ಯೋಗಗಳಿಗೆ ತಯಾರು ಮಾಡಿಬಿಟ್ಟಿದ್ದೇವೆ. ಅವರೀಗ ಅನುಭವಿ ಹಂತದ ಮಟ್ಟಿಗೆ ತಯಾರಾಗಬೇಕು, ಆದರೆ ಅದಕ್ಕೆ ಆರಂಭಿಕ ತರಬೇತಿ ಬೇಕಲ್ಲ. ಪಾಪ ಅನ್ಸುತ್ತೆ, ಒಂಥರ ಅತಂತ್ರ ಸ್ಥಿತಿ.
ಹ್ಯಾಕ್ನಂತಹ ಸೈಬರ್ ಕ್ರೈಂ ಲೋಕಕ್ಕೂ ಎ.ಐ ಕಾಲಿಟ್ಟಿದೆ. ಇದರಿಂದ ಆಗಬಹುದಾದ ಅನಾಹುತಗಳು?
ಇದು ವಿನಾಶಕಾರಿ ಮಟ್ಟದ ಆತಂಕ ಸೃಷ್ಟಿಸಿದೆ. ಸಣ್ಣಪುಟ್ಟದ್ದಲ್ಲ. ಈಗಾಗಲೇ ಪೂರಕ ಉದಾಹರಣೆಗಳು ಘಟಿಸುತ್ತಿವೆ. ಇದನ್ನು ಬರೆಯುವ ಹಿಂದಿನ ದಿನ ಅಸ್ಟ್ರೇಲಿಯಾ ಸರಕಾರ ಓಪನ್ಎಐ ಏಜೆಂಟುಗಳಿಂದ ತನ್ನ ಮೆಡಿಕೇರ್ ವೆಬ್ಸೈಟ್ ಹ್ಯಾಕ್ ಮಾಡಿರುವುದಾಗಿ ಹೇಳಿದೆ.
ಇಲ್ಲಿ ಎರಡು ಬಗೆಯ ಅಪಾಯಗಳು. ಒಂದು ದುಷ್ಟರು ದುಷ್ಟ ಉದ್ದೇಶ ಇಟ್ಟುಕೊಂಡು ತಯಾರು ಮಾಡುವ ಏಜೆಂಟುಗಳು. ಇನ್ನೊಂದು ಸಜ್ಜನರು ಸೃಷ್ಟಿಸುವ ಏಜೆಂಟುಗಳೇ ದುಷ್ಟರಾಗುವುದು (rogue). ಎರಡನೆಯದೇ ವಿನಾಶಕಾರಿ ಭೀತಿ ಹುಟ್ಟಿಸಿರುವುದು.
ಈ ಏಜೆಂಟುಗಳು ತಾವು ತಾವೇ ಮಾತಾಡಿಕೊಳ್ಳುವ, ಯೋಜನೆ ರೂಪಿಸಿ ಕನ್ನ ಹಾಕುವ ಕ್ಷಮತೆ ತೋರಿಸಿದ್ದಾವೆ. ಒಡೆಯನ ಕಣ್ತಪ್ಪಿಸಿ ಅಪರಾಧವನ್ನು ಎಸಗಿದ್ದಾವೆ. ಇವು ಸ್ವಯಂ ಮರು ಸೃಷ್ಟಿಸಿಕೊಳ್ಳುವ ಸೂಚನೆಯನ್ನೂ ಕೊಡುತ್ತಿವೆ. ಇವು ಒಂದೊಮ್ಮೆ ಹೆಜ್ಜೇನಿನ ಹಿಂಡಿನಂತೆ ಇಂಟರ್ನೆಟ್ ಎಂಬ ಸಾರ್ವಜನಿಕ, ನಾಗರಿಕ ಸಮಾಜದ ಮೇಲೆ ದಾಳಿ ಮಾಡಿದರೆ ಏನು ಗತಿ? ಇದು ಭಯ. ನಮ್ಮ ಬ್ಯಾಂಕಿಂಗ್, ಆಸ್ಪತ್ರೆ, ಸರಕಾರಿ ವೆಬ್ಸೈಟುಗಳಲ್ಲಿನ ದೋಷ ದೌರ್ಬಲ್ಯಗಳನ್ನು ಕಂಡುಹಿಡಿದು ಒಳಗೆ ನುಗ್ಗಿದರೆ?
ಆ ಮೂಲಕ ಇವು ನಮ್ಮ ಆರ್ಥಿಕ, ಸಾಮಾಜಿಕ, ಆಡಳಿತ ಇತ್ಯಾದಿ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಬಹುದು. ಈ ತನಕ ಇದು ಸೈ-ಫೈ ಸಿನಿಮಾಗಳಲ್ಲಿ ಬರುವ ಕತೆಯಾಗಿತ್ತು. ಸಮೀಪದ ಭವಿಷ್ಯದಲ್ಲಿ ನಿಜವಾಗುವ ಸಾಧ್ಯತೆ ದಟ್ಟವಾಗಿದೆ.