'ಮನುಷ್ಯನಿಗೆ' ಮೀಸಲಾತಿ ಕಲ್ಪಿಸುವ ಕಾಲ!
ಬಹುಶಃ ಇಂಥದ್ದೊಂದು ಗಳಿಗೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಭಾರತದಲ್ಲಿ ಮೀಸಲಾತಿಯನ್ನು ರದ್ದುಗೊಳಿಸಬೇಕೆಂಬ ಕೂಗು ಕೇಳಿಬರುತ್ತಿರುವ ಹೊತ್ತಲ್ಲೇ, ಅಲ್ಲೆಲ್ಲೋ ಮೂಲೆಯಿಂದ ‘ಮನುಷ್ಯನಿಗೆ ಮೀಸಲಾತಿ’ ಕಲ್ಪಿಸಬೇಕು ಎಂಬ ಹೊಸತೊಂದು ಆಗ್ರಹ ಕೇಳಿಬರುತ್ತಿದೆ. ಈ ಬೇಡಿಕೆ ಇಡುತ್ತಿರುವವನು ಯಾರೋ ರಾಜಕಾರಣಿಯಲ್ಲ; ಶೋಷಣೆಗೊಳಗಾದವನಲ್ಲ; ಮೆರಿಟ್ ಇಲ್ಲದವನಲ್ಲ; ಬಡವನಲ್ಲ; ಹೆಣ್ಣಲ್ಲ; ಕರಿಯನೂ ಅಲ್ಲ.
ಈತ ಬಿಲ್ ಗೇಟ್ಸ್.
ಜಗತ್ತು ಕಂಡ ಅತ್ಯಂತ ಶ್ರೇಷ್ಠ ತಂತ್ರಜ್ಞರಲ್ಲಿ ಒಬ್ಬ. ಬುದ್ಧಿವಂತ, ಶ್ರೀಮಂತ, ಬಿಳಿಯ ಮತ್ತು ಜೀವನದುದ್ದಕ್ಕೂ ಸಕಲ ಸುಖಗಳನ್ನು ಅನುಭವಿಸಿದವ. ಈತ ಕೇಳುತ್ತಿರುವ ಮೀಸಲಾತಿ ಯಾರ ವಿರುದ್ಧ? ಎಐ ಯಂತ್ರಗಳು ಮತ್ತು ರೋಬೋಗಳ ವಿರುದ್ಧ.
ಇತ್ತೀಚೆಗೆ ಬಿಲ್ ಗೇಟ್ಸ್ ಬರೆದ ಲೇಖನವೊಂದರಲ್ಲಿ, “ಎಐ ತಂತ್ರಜ್ಞಾನ ಇದುವರೆಗೆ ಜಗತ್ತು ಕಂಡ ಅತ್ಯುನ್ನತ ಸಮಾನತೆಯ ಸಾಧನವಾಗಬಹುದು, ಅಥವಾ ಅನ್ಯಾಯದ ಅತ್ಯಂತ ಕೆಟ್ಟ ಮೂಲವಾಗಬಹುದು” ಎಂದಿದ್ದಾರೆ. ಈ ಅಪಾಯ ತಪ್ಪಿಸಲು ಅವರು ಎಐ ಮೇಲೆ ತೆರಿಗೆ ವಿಧಿಸುವುದು ಸೇರಿದಂತೆ ಕೆಲವು ಪರಿಹಾರಗಳನ್ನು ಸೂಚಿಸುತ್ತಾ, ‘ಹ್ಯೂಮನ್ ರಿಸರ್ವ್ಡ್’ (Human Reserved - ಮಾನವರಿಗೆ ಮಾತ್ರ ಮೀಸಲು) ಎಂಬ ಹೊಸ ಉದ್ಯೋಗ ವರ್ಗವೊಂದನ್ನು ಸೃಷ್ಟಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಟ್ರಂಪ್, ಚುನಾವಣೆಯಲ್ಲಿ ತನ್ನ ಪಕ್ಷವನ್ನು ಗೆಲ್ಲಿಸಿದರೆ ಪ್ರತಿ ವಯಸ್ಕ ಅಮೆರಿಕನ್ನನಿಗೆ ಐದು ಸಾವಿರ ಡಾಲರ್ ಕೊಡುವುದಾಗಿ ಘೋಷಿಸಿದ್ದನ್ನು ಕೇಳಿದ್ದೆ. ಇದೀಗ ಅದೇ ದೇಶದ ಇನ್ನೋರ್ವ ಶುದ್ಧ ಕ್ಯಾಪಿಟಲಿಸ್ಟ್ ಬಿಲಿಯನೇರ್, ಮನುಷ್ಯರಿಗಾಗಿ ಮೀಸಲಾತಿ ಕಲ್ಪಿಸಬೇಕು ಎನ್ನುತ್ತಿರುವುದನ್ನು ಓದುತ್ತಿದ್ದೇನೆ.
ಗಡಿಯಾರ ಎತ್ತೆತ್ತಲೋ ತಿರುಗುತ್ತಿದೆ.
ಗೇಟ್ಸ್ ‘ರಿಸರ್ವ್’ ಎಂಬ ಪದ ಬಳಸಿದ್ದಾರಾದರೂ ಅದು ‘ಮೀಸಲಾತಿ’ಗೆ ಸಮಾನಾರ್ಥಕವಲ್ಲ ಎಂಬುದು ನನ್ನ ಅನಿಸಿಕೆ. ಅವರು ಹೇಳುತ್ತಿರುವುದು ನಮ್ಮಲ್ಲಿನ ‘ಸಬ್ಸಿಡಿ’ಗೆ ಸಮ. ಮೀಸಲಾತಿ ಎನ್ನಲಿಕ್ಕೆ ರೋಬೋಗಳು ಮನುಷ್ಯನ ಮೇಲೆ ಇನ್ನೂ ಯಾವುದೇ ದೌರ್ಜನ್ಯ ನಡೆಸಿಲ್ಲ. ನಾವು ಯಾವುದೇ ಪರಿಹಾರ ಕೇಳುತ್ತಿಲ್ಲ. ಕಾರ್ಪೊರೇಟ್ಗಳೊಂದಿಗೆ ಸಮ ಸಮ ಹೋರಾಡಲಾಗದೇ ರೈತರು ಪಡೆಯುವ ಸಬ್ಸಿಡಿಯಂತೆ ಇದು. ಈ ಸಬ್ಸಿಡಿಗಳು ಎಷ್ಟು ಪರಿಣಾಮಕಾರಿ? ಎಷ್ಟು ದೀರ್ಘಕಾಲ ಬಾಳುತ್ತವೆ? ಎಂದು ಪ್ರಶ್ನೆ ಹಾಕಿಕೊಂಡರೆ ಕಳವಳಕಾರಿ ಚಿತ್ರಣಗಳು ಕಣ್ಣೆದುರು ತೆರೆದುಕೊಳ್ಳುತ್ತವೆ.
ಗೇಟ್ಸ್ ಹೇಳುವ ‘ಮಾನವ ಮೀಸಲು’ ವಲಯಗಳು ಯಾವುವೆಂದರೆ- ವೃದ್ಧರ ಆರೈಕೆ, ಮಕ್ಕಳ ಪಾಲನೆ, ನರ್ಸಿಂಗ್, ಬೋಧನೆ, ಕೌನ್ಸೆಲಿಂಗ್ ಇತ್ಯಾದಿಯಾಗಿ. ಅಂದರೆ, ಎಲ್ಲಿ ಮನುಷ್ಯನ ಸ್ಪರ್ಶ ಮತ್ತು ವಿಶ್ವಾಸ ಬೇಕೋ ಆ ಕೆಲಸಗಳು. (ಆದರೆ ಅವರೇ ಅಂದಾಜಿಸುವಂತೆ, ಗರಿಷ್ಠ ಶೇ. ೪೦ ರಷ್ಟು ಉದ್ಯೋಗಗಳನ್ನಷ್ಟೇ ಹೀಗೆ ಮೀಸಲಿಡಬಹುದು. ಉಳಿದ ಶೇ. ೬೦ ರಷ್ಟು ಮಾರುಕಟ್ಟೆಯ ಪಾಲಾಗಲಿದೆ).
ಇತ್ತೀಚೆಗೆ ನಾನು ಆರ್ಎನ್ಎಸ್ಐಟಿ ಕಾಲೇಜಿನಲ್ಲಿ ‘ಎಐ ಎತ್ತುವ ಬಿಕ್ಕಟ್ಟುಗಳು’ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಈ ವಿಷಯ ಪ್ರಸ್ತಾಪಿಸಿದ್ದೆ.
ನೀವು ಅಲ್ಲಿ ಇಲ್ಲಿ ಈ ಚಿತ್ರಗಳನ್ನು, ವಿಡಿಯೋಗಳನ್ನು ನೋಡಿರುತ್ತೀರಿ- ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಮಹಿಳೆಯರೂ ಸೇರಿದಂತೆ ಕಾರ್ಮಿಕರು ತಮ್ಮ ಹಣೆಗೆ ಸ್ಮಾರ್ಟ್ಫೋನ್ ಮತ್ತು ಗೋಪ್ರೊ ಕ್ಯಾಮೆರಾಗಳನ್ನು ಕಟ್ಟಿಕೊಂಡು ಬಟ್ಟೆ ಮಡಚುವುದು, ಮಾವಿನಹಣ್ಣು ಕತ್ತರಿಸುವುದು, ಬಟ್ಟೆಯ ಚೀಲಗಳಿಗೆ ಇಸ್ತ್ರಿ ಮಾಡುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ಇದಕ್ಕೆ ಅವರಿಗೆ ಗಂಟೆಗೆ ಇನ್ನೂರೈವತ್ತು ರೂಪಾಯಿ ಕೊಡಲಾಗುತ್ತದೆ. ಬೆಂಗಳೂರಿನ ನ್ಯೂ ತಿಪ್ಪಸಂದ್ರದ ಮಾರುಕಟ್ಟೆಯಲ್ಲೂ ಅಂಗಡಿಯವರು, ಟೈಲರ್ಗಳು ದಿನಕ್ಕೆ ಐದಾರು ಗಂಟೆ ತಲೆಗೆ ಐಫೋನ್ ಸಿಕ್ಕಿಸಿಕೊಂಡು ತಮ್ಮ ದೈನಂದಿನ ಕೆಲಸಗಳನ್ನು ಮಾಡುವುದನ್ನು ನಾನೇ ಖುದ್ದಾಗಿ ಕಂಡಿದ್ದೇನೆ.
ಇವರೆಲ್ಲ ಉತ್ಪಾದಿಸುತ್ತಿರುವುದು ‘ಇಗೋಸೆಂಟ್ರಿಕ್ ಡೇಟಾ’ (Egocentric data). ಅಂದರೆ, ಮನುಷ್ಯನ ಕೈಗಳು ಹೇಗೆ ಚಲಿಸುತ್ತವೆ, ಹಣವನ್ನು ಹೇಗೆ ಎಣಿಸುತ್ತವೆ, ಬಟ್ಟೆಯನ್ನು ಹೇಗೆ ಮಡಚುತ್ತವೆ ಎಂಬುದನ್ನು ಆ ವ್ಯಕ್ತಿಯ ಕಣ್ಣಿನ ಜಾಗದಿಂದಲೇ ದಾಖಲಿಸಿದ ದೃಶ್ಯ. ಯಂತ್ರವೊಂದಕ್ಕೆ ತರಬೇತಿಗೆ ಬೇಕಾದ ಕಚ್ಚಾವಸ್ತು.
ಇದನ್ನೆಲ್ಲ ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬುದು ನನ್ನ ಚಿಂತೆ.
ಮೊದಲ ನೋಟಕ್ಕೆ ಮನೆಗೆಲಸದ ವೃತ್ತಿಯಲ್ಲಿರುವ ಮಹಿಳೆಯರ ಉದ್ಯೋಗಗಳಿಗೆ ಕತ್ತರಿ ಎಂಬುದು ಖಾತರಿಯಾಗುತ್ತದೆ. ಸ್ವಲ್ಪ ಮುಂದೆ ಹೋದರೆ ಈ ವೃತ್ತಿ ಮಾಡುತ್ತಿದ್ದವರು ಯಾರು? ಬಡವರು, ಕೆಳವರ್ಗದವರು ಎಂಬ ಉತ್ತರ ಹೊಳೆಯುತ್ತದೆ. ಹಾಗಾದರೆ ಎಷ್ಟು ದಿವಸ ಇವರು ಸಿರಿವಂತರ ಮನೆ ಚಾಕರಿ ಮಾಡುತ್ತಿರಬೇಕು? ಇಂತಹ ವೃತ್ತಿಗಳಲ್ಲಿ ಅದೆಷ್ಟು ಮಹಿಳಾ ದೌರ್ಜನ್ಯಗಳು ಜರುಗುವುದಿಲ್ಲ? ಅವಮಾನಗಳಾಗುವುದಿಲ್ಲವೇ? ಈ ಮೂಲಕವಾದರೂ ಇಂತಹ ಕೆಲಸಗಳಿಂದ ಮುಕ್ತಿ ದೊರಕಿ ಇವರೂ ಸಹ ಇತರೆ ಬೌದ್ಧಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ ಎಂಬ ಸಮಾಧಾನ ಹೊಳೆಯುತ್ತದೆ.
ಇನ್ನು ಸ್ವಲ್ಪ ಮುಂದೆ ಯೋಚಿಸಿದರೆ, ಈ ರೋಬೋಗಳನ್ನು ಕೊಳ್ಳಬಲ್ಲ ಶಕ್ತಿ ಯಾರಿಗಿರುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಉತ್ತರ- ಸಿರಿವಂತ ಮತ್ತು ಮೇಲ್ಮಧ್ಯಮ ವರ್ಗ. ಈ ತನಕ ಈ ಮೂಲಕವಾದರೂ ಇವರಿಗೂ ಬಡವರಿಗೂ ಒಂದು ಸಂಪರ್ಕ ಸೇತುವೆ ಇರುತ್ತಿತ್ತು; ಕೊಡು ಕೊಳ್ಳುವಿಕೆ ನಡೆಯುತ್ತಿತ್ತು. ನಮ್ಮ ಮನೆಗೆ ಬರುವ ಸಹಾಯಕಿಗೆ ವಿಶ್ವಾಸದ ಮೇರೆಗೆ ನಾವು ಅವರ ಮನೆ ಕಟ್ಟಿಸಿಕೊಳ್ಳಲು ದೊಡ್ಡ ಮೊತ್ತವನ್ನು ಮುಂಗಡವಾಗಿ ಕೊಟ್ಟದ್ದುಂಟು. ಇನ್ನು ಮುಂದೆ ಇಬ್ಬರ ನಡುವೆ ರೋಬೋಗಳು ಬಂದು ಕೂತರೆ ಈ ಸೇತುವೆ ಕಡಿದು ಸಿರಿವಂತರಿಗೆ ಬಡವರ ಅಗತ್ಯತೆ ಇರುವುದಿಲ್ಲವೇನೋ ಎಂಬ ಒಗಟು ಎದುರಾಗುತ್ತದೆ. ಸಿರಿವಂತರಿಗೆ ಶ್ರಮಿಕರ ಅಗತ್ಯವಿಲ್ಲದೇ ಹೋಗಿ ಆಳ ಕಂದಕ ಸೃಷ್ಟಿಯಾಗುವ ಆತಂಕ ಮೂಡುತ್ತದೆ.
ನಾನು ಅಂದು ಇಂತಹ ರೋಬೋಗಳು ನಮ್ಮ ಬೆಂಗಳೂರಿನ ಮೋರಿಗಳನ್ನು ಸ್ವಚ್ಛಗೊಳಿಸುವಂತಹ ಅಪಾಯಕಾರಿ ಕೆಲಸಗಳಿಗೆ ಬಂದರೆ ಇನ್ನಷ್ಟು ಅನುಕೂಲ ಎಂದಿದ್ದೆ.
ಒಂದು ವೇಳೆ ಅವರ ಆಶಯದಂತೆ ಇಲ್ಲಿ ಜಾಗತಿಕ ಮೀಸಲಾತಿ ಬಂದರೆ ಇದರಿಂದಾಗಿ ಮಧ್ಯಮವರ್ಗ ಮತ್ತು ಕೆಳವರ್ಗದ ನಡುವೆ ಸ್ಪರ್ಧೆ ಏರ್ಪಡಲಿದೆಯೇ ಎನ್ನುವ ಅನುಮಾನ ನನ್ನದು.
ಸ್ಪರ್ಧೆ ಯಾಕೆ ಗೊತ್ತೇ? ಹೇಳ್ತೀನಿ ಕೇಳಿ. ಎಐ ಕೇವಲ ಶ್ರಮಿಕರ ತಟ್ಟೆಗೆ ಕೈಹಾಕುತ್ತಿಲ್ಲ. ಅದು ಮೊದಲು ಕೈಹಾಕುತ್ತಿರುವುದೇ ವೈಟ್ಕಾಲರ್ ಉದ್ಯೋಗಿಗಳ ತಟ್ಟೆಯಲ್ಲಿ. ಅಂದರೆ ಐಟಿ, ಕಾಲ್ಸೆಂಟರ್, ಬ್ಯಾಂಕಿಂಗ್, ಮೆಡಿಸಿನ್- ಅಷ್ಟೇ ಯಾಕೆ- ಎಲ್ಲಾ ವಲಯದ ಸಂಶೋಧನೆ; ಇನ್ನು ಮುಂದೆ ಪಿಎಚ್ಡಿಗಳ ಸಂಖ್ಯೆ, ರಿಸರ್ಚ್ ಅಸಿಸ್ಟಂಟ್ಗಳ ಸಂಖ್ಯೆ ಗಣನೀಯವಾಗಿ ತಗ್ಗಲಿದೆ ಎನ್ನುತ್ತಿದ್ದಾರೆ ತಜ್ಞರು.
ಜ್ಞಾನವನ್ನು ‘ಚೀಪ್’ ಮಾಡುವ ಮೂಲಕ ಶೈಕ್ಷಣಿಕವಾಗಿ ಮುಂದಿರುವ ಮಧ್ಯಮವರ್ಗವನ್ನೂ, ದೈಹಿಕಶ್ರಮವನ್ನು ಸಸ್ತಾ ಮಾಡುವ ಮೂಲಕ ಶ್ರಮಿಕವರ್ಗವನ್ನೂ- ಏಕಕಾಲದಲ್ಲಿ ಸಮಾನ ನೆಲೆಗೆ ತಂದುನಿಲ್ಲಿಸಲಿರುವ ಎಐ- ಇದನ್ನು ಸಮಾನತೆಯ ಹರಿಕಾರ ಎಂದು ಭಾವಿಸಬೇಕೋ ಇಬ್ಬರನ್ನೂ ಬೀದಿಗೆ ತಂದು ನಿಲ್ಲಿಸುವ ವಿಧ್ವಂಸಕ ಎಂದು ಭಾವಿಸಬೇಕೋ? ಇದು ನಮ್ಮ ಎದುರು ಇರುವ ಯಕ್ಷಪ್ರಶ್ನೆ. ನಾವೀಗ ‘existential crisis’ನಲ್ಲಿದ್ದೇವೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
ಪ್ರಶ್ನೆಯಲ್ಲಿನ ಒಗಟು ಇಲ್ಲಿಗೆ ನಿಲ್ಲುವುದಿಲ್ಲ.
ಜಗತ್ತಿನ ತುಂಬ ಹರಡಿರುವ ಈ ಇಬ್ಬರೂ ಆಟದಿಂದ ಹೊರಗುಳಿದರೆ ಆಟದ ಅಂಗಳದಲ್ಲಿ ಉಳಿಯುವವರು ಯಾರು? ಬೆರಳೆಣಿಕೆಯಷ್ಟು ಬೃಹತ್ ಕಂಪನಿಗಳು, ಬಿಲಿಯನೇರ್ಗಳು, ಎಐ ಮೀರಿಸಬಲ್ಲ ತಂತ್ರಜ್ಞರು. ಅರ್ಥಾತ್ ಒಂದು ತೆಳುವಾದ ‘ಕೆನೆಪದರ’ ಮೇಲುಳಿಯುತ್ತದೆ. ಆಟದಿಂದ ಹೊರಗೆ ಉಳಿದ ಬಹುಸಂಖ್ಯಾತರು ಈ ಕೆನೆಪದರದಿಂದ ಸೇವೆ ಅಥವಾ ವಸ್ತುಗಳನ್ನು ಕೊಳ್ಳಲು ಹಣ ಎಲ್ಲಿಂದ ತರಬೇಕು? ಅಂದರೆ ಅವರ ಆದಾಯ ಎಲ್ಲಿಂದ ಬರಬೇಕು?
ಈಗ ನಾವು ಬಿಂದುಗಳನ್ನು ಪೋಣಿಸಬಹುದು. ಎಲಾನ್ ಮಸ್ಕ್ ಮತ್ತು ಇನ್ನಿತರರು ಯುಬಿಐ (ಯೂನಿವರ್ಸಲ್ ಬೇಸಿಕ್ ಇನ್ಕಂ) ಎಂಬ ಪರಿಕಲ್ಪನೆ ಬಗ್ಗೆ ಮಾತಾಡ್ತಿದ್ದಾರೆ. ಇನ್ನು ಹತ್ತರಿಂದ ಇಪ್ಪತ್ತು ವರ್ಷಗಳಲ್ಲಿ ಹಣದ ಅಗತ್ಯವೇ ಇರುವುದಿಲ್ಲ, ದುಡಿಮೆ ಎಂಬುದು ಐಚ್ಛಿಕವಾಗಿಬಿಡುತ್ತದೆ ಎಂದು ಮಸ್ಕ್ ಹೇಳುತ್ತಿದ್ದಾರೆ. ಇದೆಲ್ಲ ಅತಿರೇಕದ ಹೇಳಿಕೆ ಇರಬಹುದು. ಆದರೆ ಇದು ಯಾವುದೋ ಸತ್ಯಾಂಶವನ್ನಂತೂ ಸೂಚಿಸುತ್ತಿದೆ. ಇದರೊಂದಿಗೆ ಗೇಟ್ಸ್ ಸೂಚಿಸುವ ತೆರಿಗೆ ಉಪಾಯ ಪೋಣಿಸಿದರೆ ಪೂರ್ಣ ಚಿತ್ರಣ ದೊರಕುತ್ತದೆ.
ಟೋಕನ್ಸ್- ಅಂದರೆ ನಮ್ಮ ಮತ್ತು ಎಐ ಉಪಕರಣಗಳ ನಡುವೆ ಎಷ್ಟು ಪದತುಣುಕುಗಳ ವ್ಯವಹಾರ ನಡೆಯಿತು ಎಂಬ ಅಳತೆಮಾಪನ ಇದೆಯಲ್ಲ, ಗೇಟ್ಸ್ ಇದರ ಮೇಲೆ ತೆರಿಗೆ ಹೇರಿ ಎನ್ನುತ್ತಿದ್ದಾರೆ. (ಈ ತೆರಿಗೆ ವ್ಯವಸ್ಥೆ ತಮ್ಮ ಜೀವಿತಾವಧಿಯಲ್ಲಿ ತಾವು ಕಂಡ ಅತ್ಯಂತ ದೊಡ್ಡ ಆರ್ಥಿಕ ಬದಲಾವಣೆಯಾಗಲಿದೆ ಎಂದು ಅವರು ಹೇಳಿದ್ದಾರೆ). ಈಗಿನ ಕಾಲದಲ್ಲಿ ಇಬ್ಬರ ನಡುವೆ ನಡೆಯುವ ವಹಿವಾಟಿನ ಮೌಲ್ಯದ ಮೇಲೆ ಜಿಎಸ್ಟಿ ಬಿದ್ದಂತೆ, ಮುಂದೆ ಟೋಕನ್ಸ್ ಮೇಲೆ ತೆರಿಗೆ ಬಿದ್ದಾಗ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹಣ ಬಂದು ಬೀಳುತ್ತದೆ. ಆ ತೆರಿಗೆಯಿಂದ ಬರುವ ಹಣವನ್ನು ಕೆಲಸ ಕಳೆದುಕೊಂಡವರ ಮರುತರಬೇತಿ ಮತ್ತು ಸಾಮಾಜಿಕ ಸುರಕ್ಷತಾ ವ್ಯವಸ್ಥೆಗೆ ಬಳಸಬಹುದು ಎನ್ನುತ್ತಾರೆ ಗೇಟ್ಸ್. ಇದನ್ನು ಮಸ್ಕ್ನ ಉಪಾಯದೊಂದಿಗೆ ಜೋಡಿಸಿದಾಗ ಇನ್ನೊಂದು ಚಿತ್ರಣ ಸಿಗುತ್ತದೆ- ಈ ಹಣವನ್ನು ಯುಬಿಐ ಹಂಚಲು ಬಳಸಬಹುದು. ಅಂದರೆ, ಸರ್ಕಾರಗಳು ಈ ಕೆನೆಪದರದಿಂದ ಬೃಹತ್ ಮೊತ್ತದ ತೆರಿಗೆ ಪಡೆದು, ಇನ್ನುಳಿದ ಬಹುಸಂಖ್ಯಾತರಿಗೆ ಜೀವನಾಂಶ ಹಂಚುವುದು. ಈಗೇನೋ ಸರ್ಕಾರಗಳು ಸಣ್ಣ ಕೃಷಿಕರಿಗೆ ನಾಲ್ಕು ತಿಂಗಳಿಗೆ ಎರಡು ಸಾವಿರದಂತೆ, ವರ್ಷಕ್ಕೆ ಆರು ಸಾವಿರ ರೂಪಾಯಿ ಹಂಚುತ್ತಿವೆಯಲ್ಲ, ಅದನ್ನೇ ಇಡೀ ಜನಸಂಖ್ಯೆಗೆ ವಿಸ್ತರಿಸುವುದು.
ಇದರರ್ಥ, ಈಗಿರುವ ಮಧ್ಯಮವರ್ಗವನ್ನೂ ಪರಾವಲಂಬಿಯಾಗಿಸಿ ಬಡವರ್ಗದೊಂದಿಗೆ ಲೀನಗೊಳಿಸುವುದೇ? ನನಗೆ ಗೊತ್ತಿಲ್ಲ.
ಉದ್ಯೋಗ ಮನುಷ್ಯನಿಗೆ ಹಣ ಮಾತ್ರವಲ್ಲ; ಗುರುತು, ಘನತೆ, ಸಾಮಾಜಿಕ ಸಂಪರ್ಕ ಮತ್ತು ಬದುಕಿಗೆ ಒಂದು ರಚನೆಯನ್ನು ಕೊಡುತ್ತದೆ. ನಿರುದ್ಯೋಗ ಹೆಚ್ಚಾದಾಗ ಅಮೆರಿಕದಲ್ಲಿ ಜನರು ಮಾದಕವ್ಯಸನಕ್ಕೆ ಬಲಿಯಾದರು ಎಂದು ಗೇಟ್ಸ್ ಉದಾಹರಿಸುತ್ತಾರೆ. ಎಐ ಇಂತಹ ಅಪಾಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ವಾದಿಸುತ್ತಾರೆ. ವೈಟ್ಕಾಲರ್ ಮತ್ತು ಬ್ಲೂಕಾಲರ್ ಏಕಕಾಲದಲ್ಲಿ ನಿರುದ್ಯೋಗಕ್ಕೆ ಜಾರಿದಾಗ ಇಂತಹ ಅಪಾಯಗಳು ಜಾಸ್ತಿಯಾಗಬಹುದು ಎನ್ನುವುದು ಅವರ ಎಚ್ಚರಿಕೆ.
ಇದು ಕೇವಲ ಆರ್ಥಿಕ ಅಪಾಯವಲ್ಲ. ಚೀನಾ, ರಷ್ಯಾ ಮತ್ತು ಯೆಮನ್ಗೆ ಸಂಬಂಧಿಸಿದವರು ಎಐ ಬಳಸಿ ಕ್ಷಿಪಣಿ, ಡ್ರೋನ್, ಬಾಂಬ್ಗಳ ವಿನ್ಯಾಸಕ್ಕೆ ಯತ್ನಿಸಿದ್ದನ್ನೂ, ಕೆಲವರು ಜೈವಿಕ ಅಸ್ತ್ರಕ್ಕೆ ನೆರವಾಗಬಲ್ಲ ಸಂಶೋಧನೆಗೆ ಯತ್ನಿಸಿದ್ದನ್ನೂ ತಾನು ತಡೆದಿರುವುದಾಗಿ ಆಂಥ್ರೋಪಿಕ್ ಕಂಪನಿ ಇತ್ತೀಚಿನ ವರದಿಯಲ್ಲಿ ಹೇಳಿಕೊಂಡಿದೆ. ಎಲ್ಲೆಡೆ ಎಐ ಪಾರ್ನ್ ಹೆಚ್ಚುತ್ತಿದೆ. ಮುಂಚೆ ಇಂತಹ ಜ್ಞಾನ ಇಂಟರ್ನೆಟ್ಟಿನ ಆಳದಲ್ಲಿತ್ತು. ಬಳಸಲು ಕೊಂಚ ತಜ್ಞತೆ ಬೇಕಿತ್ತು. ಈಗ ಎಐ ಸಹಾಯದಿಂದ ಯಾರು ಬೇಕಾದರೂ ಮನೆಯಲ್ಲೇ ಕೂತು ‘ಕುಕ್’ ಮಾಡಬಹುದಾಗಿದೆ.
ಡೀಪ್ಫೇಕ್, ಸೈಬರ್ ದಾಳಿಗಳೂ ಹೀಗೆಯೇ. ಈಗಾಗಲೇ ವ್ಯಾಪಿಸಿರುವ ಸೈಬರ್ದಾಳಿಗಳು (ಒಟಿಪಿ ಕರೆಗಳು, ಡಿಜಿಟಲ್ ಅರೆಸ್ಟ್ಗಳು, ಡೀಪ್ಫೇಕ್ ವಂಚನೆಗಳು) ನಮ್ಮಲ್ಲಿನ ನಿರುದ್ಯೋಗದ ಸಂಕೇತವೆಂದು ನನ್ನ ಭಾವನೆ.
ಮೊನ್ನೆ ಮನು ಜೋಸೆಫ್ರ ಒಂದು ಉತ್ತಮ ಲೇಖನ ಓದುತ್ತಿದ್ದೆ. ಅವರ ಪ್ರಕಾರ, ನಿರುದ್ಯೋಗ ಹೆಚ್ಚುತ್ತಿರುವುದಕ್ಕೆ ಎಐ ಅಲ್ಲದ ಇನ್ನೊಂದು ಕಾರಣವೂ ಇದೆ. ನಾವೀಗ ಹೆಚ್ಚೆಚ್ಚು ಪದವೀಧರರನ್ನು ಉತ್ಪಾದಿಸುತ್ತಿದ್ದೇವೆ. ಆದರೆ ತಕ್ಕನಾಗಿ ಉನ್ನತ ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ತೀರಾ ಸರಕಾರಗಳ ವೈಫಲ್ಯ ಎನ್ನಲಾಗದು. ಇದು ಸಾಮಾಜಿಕ ಬದಲಾವಣೆ. ಆದರೆ ಹೀಗೆ ಪದವಿ ಪಡೆದ ಪ್ರತಿಯೊಬ್ಬನೂ ವೈಟ್ಕಾಲರ್ ಉದ್ಯೋಗಿಯಾಗಬೇಕೆಂದು ನಿರೀಕ್ಷೆಯ ಒತ್ತಡ ಹೇರುತ್ತಿದ್ದೇವೆ. ಉದ್ಯೋಗ ಸಿಗದಿದ್ದಾಗ ಆ ನಿರುದ್ಯೋಗಿ ಪದವೀಧರ ಮೈಬಗ್ಗಿಸಿ ದುಡಿಯಲಾರ. ಆಗ ಅವನು ಇಂತಹ ಅಪರಾಧ ಕೃತ್ಯಗಳತ್ತ ಆಕರ್ಷಿತನಾಗಬಹುದು. ಅನ್ಯಮಾರ್ಗವಿಲ್ಲದವರು ಜೊಮೆಟೋ, ಸ್ವಿಗ್ಗಿಗಳಂತಹ ‘ಗಿಗ್’ ಜಾಬ್ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇಂತಹ ಪ್ರಶ್ನೆಗಳನ್ನು ಸವಾಲುಗಳನ್ನು ಎದುರಿಸಲು ದುರದೃಷ್ಟವಶಾತ್ ನಮ್ಮ ನಾಯಕರು, ತಜ್ಞರು ಮತ್ತು ಸಮುದಾಯಗಳು ಸಿದ್ಧರಾಗಿಲ್ಲ, ಇವರ ಯಾರ ಬಳಿಯೂ ಎಐ ಯುಗಕ್ಕೆ ಸುಗಮವಾಗಿ ಪ್ರವೇಶಿಸಲು ಯಾವುದೇ ಸ್ಪಷ್ಟ ಯೋಜನೆಯಿಲ್ಲ. ಒಂದು ಗುಂಪು ಎಐ ಎಂದರೆ ನಗಾಡುತ್ತಿದ್ದರೆ ಇನ್ನೊಂದು ಗುಂಪು ಭಯಭೀತರಾಗಿ ಕುಳಿತಿದ್ದಾರೆ. ಸ್ಥಿತಪ್ರಜ್ಞರಾಗಿ ಕುಳಿತು ಚರ್ಚಿಸಿ ಇದು ಉಂಟು ಮಾಡಲಿರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಲ್ಲೋಲ-ಕಲ್ಲೋಲಗಳಿಗೆ ತಕ್ಕನಾಗಿ ಅಗತ್ಯ ಕಾನೂನು ರಚಿಸುವ ತಾಳ್ಮೆ ತೋರುತ್ತಿಲ್ಲ.
ಪ್ರತಿ ಆರು ತಿಂಗಳಿಗೊಮ್ಮೆ ಚಿತ್ರಣ ಬದಲಾಗುತ್ತಿದೆ. ಮಾರುಕಟ್ಟೆ ಡೋಲಾಯಮಾನ ಸ್ಥಿತಿಯಲ್ಲಿದೆ. ಎಐನ ನಾಗಾಲೋಟವನ್ನು ನಿಲ್ಲಿಸುವುದು ಕಂಪನಿಗಳಿಗೂ ಸರ್ಕಾರಗಳಿಗೂ ಇಷ್ಟವಿಲ್ಲ. ಈ ವೇಗವನ್ನು ತಡೆದುಕೊಳ್ಳಲೂ ಸಹ ಯಾರಿಗೂ ಆಗುತ್ತಿಲ್ಲ. ನಾವು ಓಡಿಸುವ ಕಾರಿನ ವೇಗ ಹೆಚ್ಚಾದಂತೆ ನಮಗೆ ಸ್ಟಿಯರಿಂಗ್ನ ನಿಯಂತ್ರಣ ತಪ್ಪುತ್ತದೆ. ಸ್ಟಿಯರಿಂಗ್ ನಮ್ಮ ನಿಯಂತ್ರಣದಲ್ಲಿರುವಷ್ಟು ವೇಗದಲ್ಲಿ ಓಡಬೇಕೆಂಬುದು ಉಳಿದೆಲ್ಲರ ಆಗ್ರಹ. ಕತ್ತಲೆಯಲ್ಲಿ ವಾಹನ ಓಡಿಸುವಾಗ ಎದುರಿನ ರಸ್ತೆ ಎಷ್ಟು ಮಾತ್ರ ಗೋಚರವೋ ಅಷ್ಟು ಸುರಕ್ಷೆ ಖಚಿತ. ಮಿಕ್ಕಿದ್ದು ‘unknown’.
ಈಗಿನ ಸಬ್ಸಿಡಿಗಳು ಫಲಾನುಭವಿಗಳಿಗೆ ಘನತೆಯುಕ್ತ ಬದುಕು ಒದಗಿಸಿರುವವೋ ಅಥವಾ ಇನ್ನಷ್ಟು ದುರ್ಬಲರನ್ನಾಗಿಸಿ ಪರಾವಲಂಬಿಗಳನ್ನಾಗಿಸಿವೆಯೋ ಎಂಬುದನ್ನೂ ಯೋಚಿಸಬೇಕಿದೆ.